ADVERTISEMENT

ದೆಹಲಿ ಚಲೋ ಮೆರವಣಿಗೆಗೆ ತಡೆ: ರೈತರನ್ನು ಚದುರಿಸಲು ಅಶ್ರುವಾಯು ಶೆಲ್‌ ಪ್ರಯೋಗ

ಪಿಟಿಐ
Published 8 ಡಿಸೆಂಬರ್ 2024, 7:59 IST
Last Updated 8 ಡಿಸೆಂಬರ್ 2024, 7:59 IST
   

ಚಂಡೀಗಢ: ಎಂಎಸ್‌ಪಿಗೆ ಕಾನೂನು ಖಾತರಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 101 ರೈತರ ಗುಂಪು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಿಂದ ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯತ್ತ ಮೆರವಣಿಗೆ ಹೊರಟಿದ್ದರು. ಆದರೆ ಪಾದಯಾತ್ರೆ ‌ಕೆಲವು ಮೀಟರ್‌ ಸಾಗಿದ ಬಳಿಕ ರೈತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.

‌‌‌ಪಾದಯಾತ್ರೆ ಕೈಗೊಳ್ಳಲು ಅಗತ್ಯವಿರುವ ಅನುಮತಿ ಪತ್ರ ತೋರಿಸುವಂತೆ ಹರಿಯಾಣ ಪೊಲೀಸರು ರೈತರಿಗೆ ಕೇಳಿದ್ದಾರೆ.

ಅಶ್ರುವಾಯು ಶೆಲ್‌ ಸಿಡಿಸಿದ ಪೊಲೀಸರು

ಶಂಭು ಗಡಿಯಲ್ಲಿ ಪ್ರತಿಭಟನಾ ರೈತರನ್ನು ತಡೆದು ನಿಲ್ಲಿಸಿದ ಪೊಲೀಸರು ಅವರ ಗುರುತಿನ ಚೀಟಿಯನ್ನು ಕೇಳಿದ್ದಾರೆ. ಗುರುತಿನ ಚೀಟಿ ನೀಡಲು ನಿರಾಕರಿಸಿದ ರೈತರು ಬ್ಯಾರಿಗೇಡ್‌ಗಳನ್ನು ತಳ್ಳಿ ಮುನ್ನುಗ್ಗಲು ಯತ್ನಿಸಿದ್ದಾರೆ. ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ ಸಿಡಿಸಿದ್ದಾರೆ.

ADVERTISEMENT

ನಮ್ಮ ಬಳಿ 101 ರೈತರ ಹೆಸರುಗಳ ಪಟ್ಟಿ ಇದೆ. ಅವರನ್ನು ಗುರುತಿಸಿದ ಬಳಿಕ ನಾವು ಮುಂದುವರಿಯಲು ಅವಕಾಶ ನೀಡಬಹುದು. ಆದರೆ ಅವರು ಗುರುತಿನ ಚೀಟಿ ನೀಡುತ್ತಿಲ್ಲ ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸರು ಗುರುತಿನ ಚೀಟಿ ನೀಡುವಂತೆ ಕೇಳುತ್ತಿದ್ದಾರೆ. ಗುರುತಿನ ಚೀಟಿಗಳನ್ನು ಏಕೆ ನೀಡಬೇಕು. ನಾವು ಗುರುತಿನ ಚೀಟಿಗಳನ್ನು ನೀಡುತ್ತೇವೆ. ಆದರೆ ಅವರು ನಮಗೆ ದೆಹಲಿಗೆ ಹೋಗಲು ಅನುಮತಿ ನೀಡಬೇಕು ಎಂದು ಪ್ರತಿಭಟನಾನಿರತ ರೈತರೊಬ್ಬರು ಹೇಳಿದ್ದಾರೆ.

ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಜಾರಿ ಮಾಡಿದೆ. ‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನೀವು ಮುಂದುವರಿಯಬೇಡಿ ಎಂದು ಹರಿಯಾಣ ಪೊಲೀಸರು ರೈತರಿಗೆ ಹೇಳಿದ್ದಾರೆ. ರೈತರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು, ಕಬ್ಬಿಣದ ಮೆಶ್‌ಗಳನ್ನು ಅಳವಡಿಸಲಾಗಿದೆ.

ಎಂಎಸ್‌ಪಿಗೆ ಕಾನೂನು ಖಾತರಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್‌ ಮಜ್ದೂರ್‌ ಮೋರ್ಚಾ ಸಂಘಟನೆಯ ನೂರಾರು ರೈತರು ಶಂಭು ಹಾಗೂ ಖನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.