ADVERTISEMENT

ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌: ಟೋಲ್‌ ಆಪರೇಟರ್‌ಗಳಿಗೆ ಎನ್‌ಎಚ್‌ಎಐ ಪರಿಹಾರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 15:40 IST
Last Updated 22 ಆಗಸ್ಟ್ 2025, 15:40 IST
ಫಾಸ್ಟ್‌ಟ್ಯಾಗ್‌
ಫಾಸ್ಟ್‌ಟ್ಯಾಗ್‌   

ನವದೆಹಲಿ: ಫಾಸ್ಟ್‌ಟ್ಯಾಗ್‌ ಆಧಾರಿತ ವಾರ್ಷಿಕ ಟೋಲ್‌ ಪಾಸ್‌ ವ್ಯವಸ್ಥೆ ಆ.15ರಿಂದ ಜಾರಿಗೆ ಬಂದಿದ್ದು, ಹೊಸ ವ್ಯವಸ್ಥೆ ಜಾರಿಯಿಂದ ಆಗುವ  ‘ದರ ವ್ಯತ್ಯಾಸ‘ಕ್ಕೆ ಟೋಲ್‌ ಪ್ಲಾಜಾ ಆಪರೇಟರ್‌ಗಳಿಗೆ ಮೂರು ತಿಂಗಳವರೆಗೆ ನಷ್ಟ ಭರ್ತಿ ಪಾವತಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ. 

ವಾರ್ಷಿಕ ಪಾಸ್‌ನಿಂದ ಟೋಲ್‌ಗಳಲ್ಲಿ ಬಳಕೆದಾರರಿಂದ ಕಡಿತಗೊಳ್ಳುತ್ತಿದ್ದ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ. ಈ ವ್ಯತ್ಯಾಸವನ್ನು ಎನ್‌ಎಚ್‌ಎಐ, ಟೋಲ್‌ ಗುತ್ತಿಗೆದಾರರಿಗೆ ಪಾವತಿಸಲಿದೆ. ಇದಕ್ಕಾಗಿ ದೇಶದಾದ್ಯಂತ ‘ಏಕರೂಪದ ಪರಿಹಾರ ವ್ಯವಸ್ಥೆ ಜಾರಿಗೊಳಿಸಲಾಗುವುದು ಮತ್ತು  ನಷ್ಟ ಭರ್ತಿಯನ್ನು ಮೂರು ತಿಂಗಳವರೆಗೆ ಮಾತ್ರ ಪಾವತಿಸಲಾಗುವುದು‘ ಎಂದು ಎನ್‌ಎಚ್‌ಎಐ ಸ್ಪಷ್ಟಪಡಿಸಿದೆ. 

ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ), ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ (ಐಎಚ್‌ಎಂಸಿಎಲ್‌) ಯಿಂದ ಸಂಗ್ರಹಿಸುವ ದತ್ತಾಂಶದ ಮೂಲಕ ವಾರ್ಷಿಕ ಪಾಸ್‌ ವ್ಯವಸ್ಥೆಯಡಿ ಟೋಲ್‌ ದಾಟಿದ ವಾಹನಗಳ ಸಂಖ್ಯೆ ಎಷ್ಟು ಎನ್ನುವುದು ನಿಖರವಾಗಿ ತಿಳಿಯಲಿದೆ. 

ADVERTISEMENT

‘ಹೊಸದಾಗಿ ಖರೀದಿಸುವ ಅಗತ್ಯವಿಲ್ಲ’

ಫಾಸ್ಟ್‌ಟ್ಯಾಗ್‌  ವಾರ್ಷಿಕ ಪಾಸ್‌ನ ಮೌಲ್ಯ ₹3 ಸಾವಿರ. ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ ವೇಗಳ 1150 ಟೋಲ್‌ ಪ್ಲಾಜಾಗಳಲ್ಲಿ ಎಲ್ಲ ವಾಣಿಜ್ಯೇತರ ವಾಹನಗಳು 200 ಟ್ರಿಪ್‌ಗಳವರೆಗೆ ಈ ಪಾಸ್‌ ಬಳಸಬಹುದು. 200 ಟ್ರಿಪ್‌ ಪೂರ್ಣಗೊಂಡ ನಂತರ ‍ಮತ್ತೆ ಪಾಸ್‌ ರೀಚಾರ್ಜ್‌ ಮಾಡಿಕೊಳ್ಳಬಹುದು. ಈಗಾಗಲೇ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್‌ ಇರುವವರು ಹೊಸದಾಗಿ ಖರೀದಿಸುವ ಅಗತ್ಯ ಇಲ್ಲ. ರಾಜ್‌ಮಾರ್ಗ್‌ ಯಾತ್ರಾ ಆ್ಯಪ್‌ ಅಥವಾ ಎನ್‌ಎಚ್‌ಎಐ ವೆಬ್‌ಸೈಟ್‌ನಲ್ಲಿರುವ ಲಿಂಕ್‌ ಬಳಸಿ ಒಂದೇ ಬಾರಿ  ₹3 ಸಾವಿರ ರಿಚಾರ್ಜ್‌ ಮಾಡಿಕೊಳ್ಳುವ ಮೂಲಕ ವಾರ್ಷಿಕ ಪಾಸ್‌ ಸಕ್ರಿಯಗೊಳಿಸಿಕೊಳ್ಳಬಹುದು.  2024–25ರಲ್ಲಿ ಎನ್‌ಎಚ್‌ಎಐ ₹72931 ಕೋಟಿ  ಟೋಲ್‌ ಸಂಗ್ರಹಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.