ADVERTISEMENT

ಉಗ್ರರಿಗೆ ಹಣ: ಕಪ್ಪುಪಟ್ಟಿಯತ್ತ ಪಾಕ್

ಭಯೋತ್ಪಾದನೆ ತಡೆಗೆ ಕ್ರಮ ಕೈಗೊಳ್ಳುವಲ್ಲಿ ವಿಫಲ: ಭಾರತದ ಪ್ರತಿಪಾದನೆಗೆ ಜಯ

ಪಿಟಿಐ
Published 23 ಆಗಸ್ಟ್ 2019, 20:15 IST
Last Updated 23 ಆಗಸ್ಟ್ 2019, 20:15 IST
   

ನವದೆಹಲಿ: ‘ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾಗಿದೆ’ ಎಂದು ಫೈನಾನ್ಷಿಯಲ್‌ ಆ್ಯಕ್ಷನ್‌ ಟಾಸ್ಕ್‌ ಫೋರ್ಸ್‌ನ (ಎಫ್‌ಎ ಟಿಎಫ್‌) ಏಷ್ಯಾ ಪೆಸಿಫಿಕ್‌ ವಿಭಾಗವು ಹೇಳಿದೆ. ಪಾಕಿಸ್ತಾನವು ‘ಕಪ್ಪುಪಟ್ಟಿಗೆ ಸೇರಿಸಬಹುದಾದ ರಾಷ್ಟ್ರ’ ಎಂದು ಘೋಷಿಸಿದೆ.

‘ಭಯೋತ್ಪಾದಕ ಸಂಘಟನೆಗೆ ಆರ್ಥಿಕ ನೆರವು ನೀಡುವುದು ಮತ್ತು ಹಣವನ್ನು ಅಕ್ರಮವಾಗಿ ವರ್ಗಾಯಿಸುವುದನ್ನು ತಡೆಯಲು ರೂಪಿಸಿರುವ 27 ಅಂಶಗಳ ಕಾರ್ಯಕ್ರಮವನ್ನು ಜಾರಿ ಮಾಡುವಲ್ಲಿ ಪಾಕಿಸ್ತಾನ ವಿಫಲವಾಗಿದೆ’ ಎಂದು ಹೇಳಿದೆ.

ಭಯೋತ್ಪಾದಕರಿಗೆ ಆರ್ಥಿಕ ನೆರವು ಒದಗಿಸುವುದು ಮತ್ತು ಅಕ್ರಮವಾಗಿ ಹಣವನ್ನು ವರ್ಗಾಯಿಸುವವರ ಮೇಲೆ ಎಫ್‌ಎಟಿಎಫ್‌ ಕಣ್ಣಿಡುತ್ತದೆ. ಇದರ ಏಷ್ಯಾ ಪೆಸಿಫಿಕ್‌ ವಿಭಾಗದ (ಎಪಿಜಿ) ಸಭೆಯು ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಶುಕ್ರವಾರ ನಡೆದಿದೆ. ಸುಮಾರು ಏಳು ಗಂಟೆ ನಡೆದ ಸಭೆಯಲ್ಲಿ, ಭಯೋತ್ಪಾದನೆ ಹಾಗೂ ಹಣದ ಅಕ್ರಮ ವರ್ಗಾವಣೆ ವಿಚಾರವಾಗಿ ವಿಸ್ತೃತವಾಗಿ ಚರ್ಚಿಸಲಾಗಿದೆ.

ADVERTISEMENT

ಭಾರತವು ಎಫ್‌ಎಟಿಎಫ್‌ ಹಾಗೂ ಎಪಿಜಿಯ ಸದಸ್ಯರಾಷ್ಟ್ರವಾಗಿದ್ದು, ಗೃಹ, ಹಣಕಾಸು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉನ್ನತಮಟ್ಟದ ಅಧಿಕಾರಿಗಳ ತಂಡವೊಂದು ಈ ಸಭೆಗೆ ಹಾಜರಾಗಿತ್ತು. ಪಾಕಿಸ್ತಾನ ವನ್ನು ಸ್ಟೇಟ್‌ಬ್ಯಾಂಕ್‌ ಆಫ್‌ ಪಾಕಿಸ್ತಾನ ಗವರ್ನರ್‌ ನೇತೃತ್ವದ ತಂಡಪ್ರತಿನಿಧಿಸಿತ್ತು.

‘ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡುವುದನ್ನು ತಡೆಯಲು ರೂಪಿಸಿರುವ 40 ಮಾನದಂಡಗಳಲ್ಲಿ, 32 ಮಾನದಂಡಗಳನ್ನು ಪಾಕಿಸ್ತಾನ ಜಾರಿ ಮಾಡಿಲ್ಲ. ಲಷ್ಕರ್‌ ಎ– ತಯಬಾ ಹಾಗೂ ಜೈಷ್‌– ಎ– ಮಹಮ್ಮದ್‌ನಂತಹ ಸಂಘಟನೆಗಳಿಗೆ ಆರ್ಥಿಕ ನೆರವು ಒದಗಿಸುವುದನ್ನು ತಡೆಯುವಲ್ಲಿ ಅದು ವಿಫಲವಾಗಿದೆ. ಜೂನ್‌ನಲ್ಲಿ ಪಾಕ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದ ಸಂಘಟನೆಯು, ವಿಶ್ವ ಸಂಸ್ಥೆಯು ‘ಭಯೋತ್ಪಾದಕ’ ಎಂದು ಘೋಷಿಸಿದ್ದ ವ್ಯಕ್ತಿಗಳ ವಿರುದ್ಧ 15 ತಿಂಗಳೊಳಗೆ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ’ ಎಂದಿತ್ತು. ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಭಾರತವು ಹಲವು ಬಾರಿ ಒತ್ತಾಯ ಮಾಡಿತ್ತು’ ಎಂದು ಸಭೆಯಲ್ಲಿ ಹಾಜರಿದ್ದ ಭಾರತದ ಅಧಿಕಾರಿ ತಿಳಿಸಿದ್ದಾರೆ.

ತಮ್ಮ ದೇಶವು ಭಯೋತ್ಪಾದಕರ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಪಾಕಿಸ್ತಾನದ ಪ್ರತಿನಿಧಿಗಳು ನಡೆಸಿದರಾದರೂ, ಎಪಿಜಿ ರಾಷ್ಟ್ರಗಳ ಪ್ರತಿನಿಧಿಗಳು ಅದರಿಂದ ಸಂತುಷ್ಟರಾಗಲಿಲ್ಲ. ಭಯೋತ್ಪಾದನೆ ತಡೆಗೆ ಕೈಗೊಳ್ಳ ಬೇಕಾಗಿದ್ದ ಕ್ರಮಗಳಲ್ಲಿ ಪಾಕಿಸ್ತಾನವು ಸಾಧಿಸಿರುವುದು ಕನಿಷ್ಠ ಪ್ರಗತಿ ಮಾತ್ರ. ಭಯೋತ್ಪಾದನೆಗೆ ಪಾಕ್ ನೀಡುತ್ತಿರುವ ಬೆಂಬಲದ ಬಗ್ಗೆ ಸಭೆಯಲ್ಲಿದ್ದ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಆತಂಕವ್ಯಕ್ತಪಡಿಸಿದರು. ಅಲ್ಲಿ ತರಬೇತಿ ಪಡೆದ ಭಯೋತ್ಪಾದಕರು ನೆರೆ ರಾಷ್ಟ್ರ
ಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಬಗ್ಗೆಯೂ ಕಳವಳ ವ್ಯಕ್ತವಾಯಿತು’ ಎಂದು ಅಧಿಕಾರಿ ತಿಳಿಸಿದರು.

ಎಫ್‌ಎಟಿಎಫ್‌ನ 27 ಅಂಶಗಳ ಕಾರ್ಯಕ್ರಮ ಜಾರಿಯಲ್ಲಿ ಆಗಿರುವ ಪ್ರಗತಿ ಪರಿಶೀಲನೆಗಾಗಿ ಅಕ್ಟೋಬರ್‌ ನಲ್ಲಿ ಪ್ಯಾರಿಸ್‌ನಲ್ಲಿ ಎಫ್‌ಎಟಿಎಫ್‌ ಸಭೆ ನಡೆಯಲಿದೆ. ಕಪ್ಪುಪಟ್ಟಿಗೆ ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಾಕ್ ಪರಿಣಾಮಕಾರಿ ಯೋಜನೆ ರೂಪಿಸಬೇಕಾಗಿದೆ. ಉಗ್ರ ಸಂಘಟನೆ ಗಳಿಗೆ ಆರ್ಥಿಕ ನೆರವು ಒದಗಿಸುವ ವಿಚಾರದಲ್ಲಿ ಎಫ್‌ಎಟಿಎಫ್‌ ಕೆಲವು ತಿಂಗಳುಗಳಿಂದ ಪಾಕ್‌ ಮೇಲೆ ಕಣ್ಣಿಟ್ಟಿದೆ.

ಕೆಲ ಭಯೋತ್ಪಾದಕರುನ್ನು ಭಂದಿಸಿದರೂ ಬದಲಾಗದ ಸ್ಥಿತಿ

2018ರ ಜೂನ್‌ ತಿಂಗಳಿನಿಂದ ಪಾಕಿಸ್ತಾನವು ‘ಕಪ್ಪುಪಟ್ಟಿಗೆ ಸೇರಿಸಬಹುದಾದ ರಾಷ್ಟ್ರ’ ಎನಿಸಿಕೊಂಡಿದೆ. ಅಲ್ಲಿನ ಕಾನೂನುಗಳು ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಬಲ್ಲಷ್ಟು ಕಠಿಣವಾಗಿಲ್ಲ ಎಂದು ಸಂಘಟನೆ ಹೇಳಿತ್ತು. ಅದಕ್ಕಾಗಿ 27 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಲು ಸೂಚಿಸಲಾಗಿತ್ತು.

2018ರ ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನವನ್ನು ‘ಕಪ್ಪುಪಟ್ಟಿಗೆ ಸೇರಿಸಬಹುದಾದ ರಾಷ್ಟ್ರ’ಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.

ಆದರೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಭಾರತವು ಹೊಸ ದಾಖಲೆಗಳನ್ನು ನೀಡಿದ್ದಲ್ಲದೆ, ವಿಶ್ವ ಸಂಸ್ಥೆಯು ಭಯೋತ್ಪಾದಕರು ಎಂದು ಘೋಷಿಸಿರುವ ಹಫೀಜ್‌ ಸಯೀದ್‌, ಮಸೂದ್‌ ಅಜರ್‌ ಮುಂತಾದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ವಾದಿಸಿದ್ದರಿಂದ 2019ರ ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ಪುನಃ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬಹುದಾದ ರಾಷ್ಟ್ರ’ ಎಂದು ಘೋಷಿಸಲಾಯಿತು.

ತನ್ನನ್ನು ಕಪ್ಪುಪಟ್ಟಿಗೆ ಸೇರಿಸಬಹುದೆಂಬ ಭಯದಲ್ಲಿದ್ದ ಪಾಕಿಸ್ತಾನವು ಈಚೆಗೆ ಲಷ್ಕರ್‌ ಎ– ತಯಬಾ, ಜಮಾತ್‌ ಉದ್‌–ದವಾ, ಫಲಾಹ್‌ ಎ–ಇನ್ಸಾನಿಯತ್‌ ಫೌಂಡೇಷನ್‌ ಮುಂತಾದ ಸಂಘಟನೆಗಳ ಕೆಲವು ನಾಯಕರನ್ನು ಬಂಧಿಸಿತ್ತು. ಈ ಸಂಘಟನೆಗಳಿಗೆ ಸೇರಿದ 700 ಆಸ್ತಿಗಳನ್ನು ವಶಪಡಿಸಿಕೊಂಡಿರುವುದಾಗಿಯೂ ಹೇಳಿತ್ತು. ಆದರೆ ‘ಬಂಧನ ಮತ್ತು ಆಸ್ತಿ ವಶಪಡಿಸಿಕೊಂಡಿದ್ದನ್ನು ಭಯೋತ್ಪಾದನೆ ತಡೆ ನಿಟ್ಟಿನಲ್ಲಿ ಕೈಗೊಂಡ ಕಠಿಣ ಕ್ರಮ ಎಂದು ಪರಿಗಣಿಸಲಾಗದು. ಬಂಧಿತರ ವಿರುದ್ಧ ಭಯೋತ್ಪಾದನೆ ತಡೆ ಕಾಯ್ದೆಯಡಿ ಕ್ರಮ ಕೈಗೊಂಡಿಲ್ಲ’ ಎಂದು ಭಾರತ ಹಾಗೂ ಇತರ ಕೆಲವು ರಾಷ್ಟ್ರಗಳು ವಾದಿಸಿವೆ.

ಪರಿಣಾಮವೇನು?

* ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಎಫ್‌ಎಟಿಎಫ್‌ಗೆ ಅನ್ನಿಸಿದರೆ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಸಭೆಯಲ್ಲಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ

* ಕಪ್ಪುಪಟ್ಟಿಗೆ ಸೇರಿದರೆ ಆ ದೇಶವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ಐಎಂಎಫ್‌, ವಿಶ್ವಬ್ಯಾಂಕ್‌, ಎಡಿಬಿ, ಇಯು ಮತ್ತು ರೇಟಿಂಗ್‌ ಸಂಸ್ಥೆಗಳಾದ ಮೂಡೀಸ್‌, ಎಸ್‌ ಆ್ಯಂಡ್‌ ಪಿ, ಫಿಚ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿತ ಕಾಣಲಿದೆ

* ಈಗಾಗಲೇ ಆರ್ಥಿಕ ಸಮಸ್ಯೆ ಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ನೆರವು ಸಹ ಲಭಿಸದೆ, ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.