ADVERTISEMENT

ಅಪರಿಚಿತ ವಾಹನ ಡಿಕ್ಕಿ: 114 ವರ್ಷದ ಮ್ಯಾರಥಾನ್‌ ಓಟಗಾರ ಫೌಜಾ ಸಿಂಗ್‌ ಸಾವು

ಜಲಂಧರ್‌ ಜಿಲ್ಲೆಯ ಬಿಯಾಸ್‌ ಗ್ರಾಮದಲ್ಲಿ ಅಪರಿಚಿತ ವಾಹನ ಡಿಕ್ಕಿ

ಪಿಟಿಐ
Published 15 ಜುಲೈ 2025, 4:54 IST
Last Updated 15 ಜುಲೈ 2025, 4:54 IST
<div class="paragraphs"><p>ಫೌಜಾ ಸಿಂಗ್‌</p></div>

ಫೌಜಾ ಸಿಂಗ್‌

   

ಪಿಟಿಐ ಚಿತ್ರ

ಚಂಡೀಗಢ: ಅನುಭವಿ ಮ್ಯಾರಥಾನ್‌ ಓಟಗಾರ ಫೌಜಾ ಸಿಂಗ್‌ ಅವರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಸೋಮವಾರ ಮೃತಪಟ್ಟಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು.

ADVERTISEMENT

ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಬಿಯಾಸ್‌ ಗ್ರಾಮದ ರಸ್ತೆಯಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಭೋಗ್ಪುರ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದರಿಂದ ಅವರ ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್‌ ನಿಧನದ ಸುದ್ದಿಯನ್ನು ಲೇಖಕ, ಪಂಜಾಬ್‌ ರಾಜ್ಯ ಮಾಜಿ ಮಾಹಿತಿ ಆಯುಕ್ತ ಖುಷ್ವಂತ್‌ ಸಿಂಗ್‌ ದೃಢಪಡಿಸಿದ್ದಾರೆ. ಖುಷ್ವಂತ್‌ ಅವರು ಫೌಜಾ ಸಿಂಗ್‌ ಅವರ ಜೀವನಚರಿತ್ರೆಯನ್ನು ‘ದಿ ಟರ್ಬನ್ಡ್‌ ಟೊರ್ನಾಡೊ’ ಹೆಸರಿನಲ್ಲಿ ರಚಿಸಿದ್ದಾರೆ.

1911ರಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಸಿಂಗ್‌, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಅನೇಕ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದರು. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಪ್ರಥಮ ಶತಾಯುಷಿ ಎಂಬ ಕೀರ್ತಿಗೂ ಪಾತ್ರರಾಗಿದ್ದರು

ಪ್ರಧಾನಿ ಮೋದಿ ಸಂತಾಪ

ಫೌಜಾ ಸಿಂಗ್‌ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಫೌಜಾ ಸಿಂಗ್ ವಿಶಿಷ್ಟ ವ್ಯಕ್ತಿತ್ವದಿಂದ ಪರಿಚಿತರು. ಭಾರತದ ಯುವಕರಿಗೆ ಫಿಟ್ನೆಸ್ ಎಂಬ ಪ್ರಮುಖ ವಿಷಯದ ಬಗ್ಗೆ  ಸ್ಫೂರ್ತಿ ನೀಡಿದ ರೀತಿ ಅಸಾಧಾರಣವಾಗಿದೆ. ಅವರು ಅದ್ಭುತ ದೃಢನಿಶ್ಚಯ ಹೊಂದಿದ್ದ ಕ್ರೀಡಾಪಟುವಾಗಿದ್ದರು. ಅವರ ನಿಧನ ನೋವಿನ ಸಂಗತಿಯಾಗಿದೆ. ಅವರ ಕುಟುಂಬ ಮತ್ತು ಪ್ರಪಂಚದಾದ್ಯಂತದ ಇರುವ ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಬರಲಿ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.