
ನವದೆಹಲಿ: ಗಾಜಾ ನರಮೇಧದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದ ದಾಳಿಯ ಕುರಿತು ಜಾಣ ಮರೆವು ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಪ್ರಿಯಾಂಕಾ ಗಾಂಧಿ ಅವರನ್ನು ‘ಭಾರತದ ರಾಜಕೀಯದ ಮಹಿಳಾ ಘಜನಿ’ ಎಂದು ಕರೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ ಅವರು, ಇಸ್ರೇಲ್ ಸಂಸತ್ತಿನಲ್ಲಿ ಗಾಜಾ ನರಮೇಧದ ಬಗ್ಗೆ ಮಾತನಾಡುವಂತೆ ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಪ್ರಿಯಾಂಕಾ ಅವರದ್ದು ಆಯ್ದ ಆಕ್ರೋಶ ಎಂದು ಕಿಡಿಕಾರಿದ್ದಾರೆ.
‘ಪ್ಯಾಲೆಸ್ಟೀನ್’ ಬ್ಯಾಗ್ ಹಿಡಿದು ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ಅವರ ಹಳೆಯ ಚಿತ್ರವನ್ನು ಹಂಚಿಕೊಂಡಿರುವ ಭಾಟಿಯಾ, ‘ಭಾರತೀಯ ರಾಜಕೀಯದ ಮಹಿಳಾ ಘಜನಿ ಮತ್ತೆ ಬಂದಿದ್ದಾರೆ’ ಎಂದು ಅಣಕಿಸಿದ್ದಾರೆ.
‘ಪ್ಯಾಲೆಸ್ಟೀನ್ ಬ್ಯಾಗ್ ಅನ್ನು ಸಂಸತ್ತಿಗೆ ಕೊಂಡೊಯ್ಯುವುದು ಪ್ರಿಯಾಂಕಾ ಗಾಂಧಿ ಅವರಿಗೆ ಸುಲಭ. ಆದರೆ, ಅಕ್ಟೋಬರ್ 7ರಂದು 1,200 ಕ್ಕೂ ಹೆಚ್ಚು ಅಮಾಯಕರ ಹತ್ಯಾಕಾಂಡ, ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದನ್ನು ಖಂಡಿಸುವ ನೈತಿಕ ಧೈರ್ಯವನ್ನು ತೋರಿಸುವುದು ಅವರಿಗೆ ತುಂಬಾ ಕಷ್ಟ’ ಎಂದಿದ್ದಾರೆ.
‘ಇಂತಹ ಕೃತ್ಯಗಳನ್ನು ಖಂಡಿಸಬೇಕಾದರೆ ಮತಬ್ಯಾಂಕ್ ರಾಜಕೀಯವನ್ನು ಮೀರಿ ನಿಲ್ಲಬೇಕು’ ಎಂದು ಕಿಡಿಕಾರಿದ್ದಾರೆ.
2008ರಲ್ಲಿ ಬಾಲಿವುಡ್‌ನಲ್ಲಿ ಬಿಡುಗಡೆಯಾದ ‘ಘಜನಿ’ ಸಿನಿಮಾದಲ್ಲಿ ನಾಯಕನಿಗೆ ಅಲ್ಪಾವಧಿ ಮೆರೆವಿನ ಕಾಯಿಲೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.