ADVERTISEMENT

ಉತ್ತರ ಪ್ರದೇಶ: ಸಾಲದ ಕಂತು ಪಾವತಿಸದ್ದಕ್ಕೆ ಬಸ್‌ ಅಪಹರಣ!

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 21:29 IST
Last Updated 19 ಆಗಸ್ಟ್ 2020, 21:29 IST
   

ಲಖನೌ: ಬಸ್‌ನ ಮಾಲೀಕ ಸಾಲದ ಕಂತು ಪಾವತಿಸಲಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್‌ ಕಂಪನಿಯ ಏಜೆಂಟರು ಸಿನಿಮೀಯ ರೀತಿಯಲ್ಲಿ ಬಸ್‌ ಅಪಹರಿಸಿದ ಪ್ರಸಂಗ ಆಗ್ರಾದಲ್ಲಿ ನಡೆದಿದೆ.

ಹರಿಯಾಣದ ಗುರುಗ್ರಾಮದಿಂದ ಮಧ್ಯಪ್ರದೇಶದ ಪನ್ನಾ ನಗರಕ್ಕೆ ಹೊರಟಿದ್ದ ಖಾಸಗಿ ಬಸ್‌ ಆಗ್ರಾ ಪ್ರವೇಶಿಸುತ್ತಿದ್ದಂತೆ ಮೂವರು ವ್ಯಕ್ತಿಗಳು ಏಕಾಏಕಿಅದರೊಳಗೆ ನುಗ್ಗಿದ್ದಾರೆ. ಚಾಲಕನ ಬಳಿ ತೆರಳಿ ಬಸ್‌ಅನ್ನು ಝಾನ್ಸಿಯತ್ತ ಚಲಾಯಿಸುವಂತೆ ಸೂಚಿಸಿದ್ದಾರೆ.

ಈ ಹಠಾತ್‌ ಬೆಳವಣಿಗೆ ಕಂಡು ಪ್ರಯಾಣಿಕರಲ್ಲಿ ದಿಗಿಲು ಶುರುವಾಗಿದೆ. ಇದನ್ನು ಅರಿತ ಏಜೆಂಟರು, ‘ಯಾರೂ ಭಯಪಡಬೇಡಿ, ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ. ನೀವು ಹೋಗಬೇಕಾದ ಸ್ಥಳಗಳಿಗೆ ಸುರಕ್ಷಿತವಾಗಿ ಕಳುಹಿಸುತ್ತೇವೆ‘ ಎಂದು ಭರವಸೆ ಕೊಟ್ಟಿದ್ದಾರೆ.

ADVERTISEMENT

ಝಾನ್ಸಿ ತಲುಪಿದ ಕೂಡಲೇ 34 ಪ್ರಯಾಣಿಕರಿಗೆ ಬೇರೆ ಬಸ್‌ನ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ ಎಂದು ‍ಪೊಲೀಸ್‌ ಮೂಲಗಳು ತಿಳಿಸಿವೆ.

ಮಂಗಳವಾರ ರಾತ್ರಿ ಅಪಹರಿಸಲ್ಪಟ್ಟಿದ್ದ ಬಸ್‌ ಬುಧವಾರ ಬೆಳಿಗ್ಗೆ ಉತ್ತರ ಪ್ರದೇಶದ ಈಟವಾ ಜಿಲ್ಲೆಯ ಬಾಲರಾಯ್‌ ಪ್ರದೇಶದಲ್ಲಿ ಪತ್ತೆಯಾಗಿದೆ.

ಬಸ್‌ ಖರೀದಿಸಲು ಫೈನಾನ್ಸ್‌ ಕಂಪನಿಯಿಂದ ಸಾಲ ಪಡೆದಿದ್ದ ವ್ಯಕ್ತಿಯು ಮಂಗಳವಾರ ಕೋವಿಡ್‌–19ನಿಂದ ಮೃತಪಟ್ಟಿದ್ದರು. ಅವರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಾಸವಿದ್ದರು. ಬಸ್‌ ಖರೀದಿಸಲು ಪಡೆದಿದ್ದ ಸಾಲದ ಕಂತನ್ನೆಲ್ಲಾ ಪಾವತಿಸಲಾಗಿದೆ. ಯಾವುದೇ ಬಾಕಿ ಇಲ್ಲ ಎಂದು ಅವರ ಕುಟುಂಬದವರು ಫೈನಾನ್ಸ್‌ ಕಂಪನಿಗೆ ತಿಳಿಸಿದ್ದರು. ಹೀಗಿದ್ದರೂ ಬಸ್ ಅಪಹರಿಸಲಾಗಿದೆ ಎಂದು ಹೇಳಲಾಗಿದೆ.

‘ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿ ತಮ್ಮ ಊರುಗಳಿಗೆ ತಲುಪಿದ್ದಾರೆ. ಫೈನಾನ್ಸ್‌ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

‘ಬಸ್‌ನಿಂದ ತಪ್ಪಿಸಿಕೊಂಡಿದ್ದ ಮೂವರು ಪ್ರಯಾಣಿಕರು ಅಪಹರಣ ಕೃತ್ಯದ ಕುರಿತು ಮಾಹಿತಿ ನೀಡಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಬ್ಲೂಕುಮಾರ್ ಬುಧವಾರ ಬೆಳಿಗ್ಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.