ADVERTISEMENT

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇವದೂತೆ: ಪಿ.ಚಿದಂಬರಂ ಲೇವಡಿ

ಪಿಟಿಐ
Published 29 ಆಗಸ್ಟ್ 2020, 21:21 IST
Last Updated 29 ಆಗಸ್ಟ್ 2020, 21:21 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ‘ದೇಶದ ಇಂದಿನ ಆರ್ಥಿಕ ದುಸ್ಥಿತಿಗೆ ದೇವರೇ ಕಾರಣ’ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಸಾರ್ವಜನಿಕ ಮತ್ತು ರಾಜಕೀಯ ವಲಯಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಟ್ರೋಲ್‌ ಆಗಿದೆ.

ಕಾಂಗ್ರೆಸ್‌ ನಾಯಕ ಮತ್ತು ‌ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೂಡ ಶನಿವಾರ ನಿರ್ಮಲಾ ಸೀತಾರಾಮನ್‌ ಅವರನ್ನು ‘ದೇವದೂತೆ’ (ಮೆಸೆಂಜರ್‌ ಆಫ್‌ ಗಾಡ್‌) ಎಂದು ಸಂಬೋಧಿಸಿ ಲೇವಡಿ ಮಾಡಿದ್ದಾರೆ.

ಜಿಎಸ್‌ಟಿ ಮಂಡಳಿ ಸಭೆಯಲ್ಲಿಗುರುವಾರ ಮಾತನಾಡಿದ್ದ ಹಣಕಾಸು ಸಚಿವರು‌, ‘ಕೊರೊನಾ ಬಿಕ್ಕಟ್ಟು ದೇವರ ಆಟ. ಜಿಎಸ್‌ಟಿ ಸಂಗ್ರಹ ಕುಸಿತಕ್ಕೆ ಕೋವಿಡ್ ಕಾರಣ’ ಎಂದು ಹೇಳಿದ್ದರು.

ADVERTISEMENT

‘ಕೊರೊನಾ ಭಾರತಕ್ಕೆ ಕಾಲಿಡುವುದಕ್ಕೂ ಮುಂಚೆಯೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ಬಗ್ಗೆ ಹಣಕಾಸು ಸಚಿವರು ಏನು ಹೇಳುತ್ತಾರೆ’ ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ರಾಜ್ಯಗಳಿಗೆ ಅನ್ಯಾಯ

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಷಯದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನ್ಯಾಯ ಮಾಡಿದೆ’ ಎಂದು ಚಿದಂಬರಂ ಆರೋಪಿಸಿದ್ದಾರೆ. ‘ಜಿಎಸ್‌ಟಿ ವಿಷಯದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣಚಿಕೊಳ್ಳಲು ಯತ್ನಿಸುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಜಿಎಸ್‌ಟಿ ಬಾಕಿ ಉಳಿಕೆಯಿಂದ ಆದ ನಷ್ಟವನ್ನು ಭರಿಸಲು ಸಾಲ ಪಡೆಯುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಾಡಿರುವ ಸಲಹೆಯನ್ನೂ ಅವರು ಟೀಕಿಸಿದ್ದಾರೆ.

‘ರಾಜ್ಯಗಳ ಮೇಲೆ ಕೇಂದ್ರ ಗದಾಪ್ರಹಾರ’

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಷ್ಟ ಭರಿಸುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ ತನ್ನ ಹೊಣೆಗೇಡಿತನ ಪ್ರದರ್ಶಿಸಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಕೊರೊನಾಸಂಕಷ್ಟ ದೇವರ ಅಸಾಮಾನ್ಯ ಆಟ ಎನ್ನುವ ಮೂಲಕ ಕೇಂದ್ರ ಸರ್ಕಾರ, ಒಕ್ಕೂಟ ವ್ಯವಸ್ಥೆಯ ಬಹುದೊಡ್ಡ ನಂಬಿಕೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಸುಲಭದ ಬಡ್ಡಿದರದಲ್ಲಿ ಸಾಲ ಪಡೆದು, ಅದನ್ನು ರಾಜ್ಯಗಳೇ ತೀರಿಸಲಿ ಎಂಬ ಆಯ್ಕೆ ಮುಂದಿಟ್ಟು ರಾಜ್ಯಗಳ ಆರ್ಥಿಕತೆಗೆ ಕೊಳ್ಳಿ ಇಟ್ಟಿದೆ’ ಎಂದು ಕಿಡಿಕಾರಿದ್ದಾರೆ.

ನಿರ್ಮಲಾ ಹೇಳಿಕೆಗೆ ಖರ್ಗೆ ಟೀಕೆ

‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ದೇವರ ಆಟ’ ಎಂದು ಹೇಳುತ್ತಾ, ಜಿಎಸ್‌ಟಿ ಪರಿಹಾರವನ್ನು ರಾಜ್ಯಗಳಿಗೆ ಪಾವತಿಸದೇ ಇದ್ದರೆ ಒಕ್ಕೂಟ ವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಧಕ್ಕೆ ಮಾಡಿದಂತೆ’ ಎಂದು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ಹಿಂದೆಂದೂ ಕಂಡು ಕೇಳರಿಯದ ‘ದೇವರ ಆಟ’ ಎನ್ನುವ ಮೂಲಕ ರಾಜ್ಯದ ಪಾಲು ಕೊಡುವುದರಿಂದ ಪಾರಾಗಲು ಕೇಂದ್ರ ಮುಂದಾಗಿದೆ. ಇಂತಹ ಹೇಳಿಕೆಗಳ ಮೂಲಕ ತನ್ನ ಬದ್ಧತೆಯಿಂದ ಕೇಂದ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.