ADVERTISEMENT

ಅಶೋಕ ಚಕ್ರ ಬದಲು ಉರ್ದು ಪದ: ರಾಷ್ಟ್ರಧ್ವಜ ಅಪಮಾನಿಸಿದ 18 ಜನರ ವಿರುದ್ಧ ಎಫ್‌ಐಆರ್

ಪಿಟಿಐ
Published 31 ಜುಲೈ 2023, 3:07 IST
Last Updated 31 ಜುಲೈ 2023, 3:07 IST
FIR.
FIR.   

ಮೇದಿನಿನಗರ(ಜಾರ್ಖಂಡ್): ಮೊಹರಂ ಮೆರವಣಿಗೆ ವೇಳೆ ರಾಷ್ಟ್ರಧ್ವಜವನ್ನು ವಿರೂಪಗೊಳಿಸಿದ ಆರೋಪದ ಮೇಲೆ ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 175 ಕಿ. ಮೀ ದೂರದಲ್ಲಿರುವ ಚೈನ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಮೊಹರಂ ಅಂಗವಾಗಿ ಶಹಪುರ, ಕಲ್ಯಾಣಪುರ ಮತ್ತು ಕಂಕಾರಿ ಮುಂತಾದ ಸ್ಥಳಗಳಲ್ಲಿ ಮೆರವಣಿಗೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಮೆರವಣಿಗೆಯಲ್ಲಿ ಡಿಜೆಗಳನ್ನು ಹಾಕಲಾಗಿತ್ತು. ವಿರೂಪಗೊಳಿಸಿದ್ದ ರಾಷ್ಟ್ರಧ್ವಜವನ್ನು ಹಿಡಿದು ಸಾಗಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಿಶವ್ ಗಾರ್ಗ್ ಹೇಳಿದ್ದಾರೆ. ಧ್ವಜವನ್ನು ವಿರೂಪಗೊಳಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ.

ADVERTISEMENT

ಮೆರವಣಿಗೆಯಲ್ಲಿ ಬಳಸಿದ್ದ ಧ್ವಜದ ಬಣ್ಣಗಳು ರಾಷ್ಟ್ರಧ್ವಜದ ಬಣ್ಣಗಳೇ ಆಗಿದ್ದವು. ಆದರೆ, ಅಶೋಕ ಚಕ್ರ ಇರಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಅಶೋಕ ಚಕ್ರದ ಇರಬೇಕಾದ ಸ್ಥಳದಲ್ಲಿ ಕೆಲವು ಉರ್ದು ಪದಗಳನ್ನು ಬರೆಯಲಾಗಿತ್ತು. ಕೆಳಭಾಗದಲ್ಲಿ ಕತ್ತಿಯ ಗುರುತು ಇತ್ತು. ಈ ಸಂಬಂಧ 18 ಜನರ ವಿರುದ್ಧ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ಎಂದು ಗಾರ್ಗ್ ಹೇಳಿದರು.

ಪ್ರಕರಣದ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಚೈನ್‌ಪುರ ಪೊಲೀಸ್ ಠಾಣೆ ಪ್ರಭಾರಿ ರೂಪೇಶ್ ಕುಮಾರ್ ದುಬೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.