ADVERTISEMENT

ಶಿವಾಜಿ–ಟಿಪ್ಪು ಕುರಿತ ಹೇಳಿಕೆ: ಬಿಜೆಪಿ–ಕಾಂಗ್ರೆಸ್ ನಗರ ಅಧ್ಯಕ್ಷರ ವಿರುದ್ಧ ಕೇಸ್

ಪಿಟಿಐ
Published 16 ಫೆಬ್ರುವರಿ 2026, 16:47 IST
Last Updated 16 ಫೆಬ್ರುವರಿ 2026, 16:47 IST
   

ಪುಣೆ: ಛತ್ರಪತಿ ಶಿವಾಜಿ ಮಹಾರಾಜ ಮತ್ತು ಟಿಪ್ಪು ಸುಲ್ತಾನ್‌ ಅವರನ್ನು ‘ಸಮಾನಾಂತರ’ವಾಗಿ ನೋಡಿ, ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಹರ್ಷವರ್ಧನ್‌ ಸಪಕಲ್‌ ಅವರು ನೀಡಿದ್ದ ಹೇಳಿಕೆ ಕಾರಣ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಗರ ಅಧ್ಯಕ್ಷರು ಮತ್ತು ಹಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿವೆ.

ಘಟನೆ ಕುರಿತು ಎರಡೂ ಪಕ್ಷಗಳೂ ದೂರು ನೀಡಿವೆ. ಇದರ ಅನ್ವಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದರು.

‘ಬಿಜೆಪಿ ನಗರ ಅಧ್ಯಕ್ಷ ಧೀರಜ್‌ ಘಾಟೆ, ಪಕ್ಷದ ಯುವ ಮೋರ್ಚಾದ ಅಧ್ಯಕ್ಷ ದುಷ್ಯಂತ್‌ ಮೊಹೋಲ್‌ ಮತ್ತು 50ರಿಂದ 60 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌ ನಗರ ಅಧ್ಯಕ್ಷ ಅರವಿಂದ್‌ ಶಿಂದೆ ಮತ್ತು ಇಬ್ಬರು ಇತರ ನಾಯಕರು ಮತ್ತು ಗುರುತು ಪತ್ತೆಯಾಗದ ಕೆಲವು ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ’ ಎಂದರು.

ADVERTISEMENT

ಹರ್ಷವರ್ಧನ್‌ ಅವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ ನಡೆದಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರು, ಒಬ್ಬರು ಪೊಲೀಸರು, ಇಬ್ಬರು ಪತ್ರಕರ್ತರು ಸೇರಿ 9 ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.