ADVERTISEMENT

ಗಡಿ ವಿವಾದ: ಕೇಂದ್ರ ಸರ್ಕಾರದ ನಡೆ ಪ್ರಶಂಸನಾರ್ಹ: ಏಕನಾಥ ಶಿಂದೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 16:17 IST
Last Updated 15 ಡಿಸೆಂಬರ್ 2022, 16:17 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆದ ಸಭೆ ಕುರಿತು ಮೆಚ್ಚುಗೆಯ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಈ ವಿವಾದ ಸಂಬಂಧಿಸಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿದೆ. ಈ ನಡೆ ಪ್ರಶಂಸಾರ್ಹ ಎಂದಿದ್ದಾರೆ.

‘ಈ ಸಭೆಯಿಂದ ಯಾವುದೇ ಅನುಕೂಲವಾಗಲಿಲ್ಲ’ ಎಂದು ಎನ್‌ಸಿಪಿ, ಕಾಂಗ್ರೆಸ್, ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮೈತ್ರಿಕೂಟ ವ್ಯಂಗ್ಯವಾಡಿದ ಬೆನ್ನಲ್ಲೇ ಶಿಂದೆ ಈ ಹೇಳಿಕೆ ನೀಡಿದ್ದಾರೆ.

‘ಈ ವಿವಾದವು ಹಲವಾರು ವರ್ಷಗಳಿಂದ ಇದೆ. ಆದರೆ, ವಿವಾದ ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದುಇದೇ ಮೊದಲು. ಈ ಹಿಂದೆಯೂ ಕೇಂದ್ರದಲ್ಲಿ, ಮಹಾರಾಷ್ಟ್ರದಲ್ಲಿ ಮತ್ತು ಕರ್ನಾಟಕದಲ್ಲಿ ಸರ್ಕಾರಗಳು ಇದ್ದವು. ಸಮಸ್ಯೆಯ ಸ್ಥಿತಿಗತಿ ಕುರಿತು ನಿಮಗೇ ತಿಳಿದಿದೆ’ ಎಂದು ಅವರು ಸುದ್ದಿಗಾರರ ಎದುರು ಹೇಳಿದರು.

ADVERTISEMENT

ಅಮಿತ್‌ ಶಾ ಅವರು ವಿರೋಧ ಪಕ್ಷಗಳ ಸಹಕಾರವನ್ನೂ ಕೋರಿದ್ದಾರೆ ಎಂದು ತಿಳಿಸಿದರು.

ನಕಲಿ ಟ್ವಿಟರ್‌ ಖಾತೆಗಳ ಹಾವಳಿ: ‘ಈ ಸಮಸ್ಯೆ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭೆ ವೇಳೆ ಮಾತನಾಡಿದರು. ಅಮಿತ್‌ ಶಾ ಅವರೂ ಈ ಕುರಿತು ಹೇಳಿಕೆ ನೀಡಿದರು. ನಕಲಿ ಟ್ವಿಟರ್‌ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಶಿಂದೆ ಹೇಳಿದರು.

‘ಶಾ ನೇತೃತ್ವ ಸಭೆ ಕರ್ನಾಟಕ ಪರವಾಗಿತ್ತು’
ಮುಂಬೈ(ಪಿಟಿಐ):
ಗಡಿ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆಯಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಈ ಸಭೆಯಲ್ಲಿ ನಡೆದ ಚರ್ಚೆಗಳು ಕರ್ನಾಟಕ ಪರವಾಗಿಯೇ ಇದ್ದವು ಎಂದು ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಗುರುವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಭೆಯು ಗಾಯದ ಮೇಲೆ ಬರೆ ಎಳೆದಿದೆಯಷ್ಟೆ’ ಎಂದರು.

‘ಕರ್ನಾಟಕ ಸರ್ಕಾರವು ವಿಧಾನಮಂಡಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಏಕೆ ನಡೆಸುತ್ತದೆ? ಗಡಿ ವಿವಾದ ಇನ್ನೂ ಬಗೆಹರಿಯದೇ ಇರುವಾಗ ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ಏಕೆ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.