ADVERTISEMENT

ಪಾಕಿಸ್ತಾನದ ವಶದಲ್ಲಿ ಗುಜರಾತ್‌ನ 144 ಮೀನುಗಾರರು; 1,173 ದೋಣಿಗಳು: ಸಚಿವ ಪಟೇಲ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 9:36 IST
Last Updated 5 ಮಾರ್ಚ್ 2025, 9:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗಾಂಧಿನಗರ: ಗುಜರಾತ್‌ನ 144 ಮೀನುಗಾರರು ಸದ್ಯ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 22 ಜನರನ್ನು ನೆರೆಯ ರಾಷ್ಟ್ರ ಬಂಧಿಸಿದೆ ಎಂದು ವಿಧಾನಸಭೆಗೆ ಸರ್ಕಾರ ಬುಧವಾರ ಮಾಹಿತಿ ನೀಡಿದೆ.

ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್‌ ಶಾಸಕ ಅಮಿತ್ ಚಾವ್ಡಾ ಅವರ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕೆ ಸಚಿವ ರಾಘವ್‌ಜಿ ಪಟೇಲ್‌ ಈ ಮಾಹಿತಿ ನೀಡಿದ್ದಾರೆ. 

ADVERTISEMENT

‘2023ರಲ್ಲಿ 9 ಹಾಗೂ 2024ರಲ್ಲಿ 13 ಜನ ಮೀನುಗಾರರನ್ನು ಪಾಕಿಸ್ತಾನ ಬಂಧಿಸಿದೆ. ಅರಬ್ಬಿ ಸಮುದ್ರದಲ್ಲಿ ಅಂತರರಾಷ್ಟ್ರೀಯ ಗಡಿರೇಖೆಯನ್ನು ದಾಟಿದ ಆರೋಪದಡಿ ಪಾಕಿಸ್ತಾನ ಸಾಗರ ಭದ್ರತಾ ಪಡೆಯು ಇವರನ್ನು ಬಂಧಿಸಿದೆ’ ಎಂದಿದ್ದಾರೆ.

‘ಕಳೆದ ಎರಡು ವರ್ಷಗಳಲ್ಲಿ 432 ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆಯನ್ನೂ ಮಾಡಿದೆ. 2025ರ ಜನವರಿವರೆಗೂ 144 ಮೀನುಗಾರರು ಜೈಲಿನಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಶೈಲೇಶ್ ಪಾರ್ಮರ್ ಅವರ ಪ್ರಶ್ನೆಗೆ ಉತ್ತರಿಸಿದ ರಾಘವ್‌ಜಿ, ‘2024ರ ಡಿಸೆಂಬರ್‌ವರೆಗೂ 1,173 ಮೀನುಗಾರಿಕೆ ದೋಣಿಗಳು ಪಾಕಿಸ್ತಾನದ ವಶದಲ್ಲಿವೆ. ಕಳೆದ ಎರಡು ವರ್ಷಗಳಲ್ಲಿ ಇವುಗಳಲ್ಲಿ ಒಂದೂ ಸ್ವದೇಶಕ್ಕೆ ಹಿಂದಿರುಗಿಲ್ಲ. ಮೀನುಗಾರರ ಹಾಗೂ ದೋಣಿಗಳ ರಾಷ್ಟ್ರೀಯತೆಯ ಪುರಾವೆಗಳನ್ನು ಕಾಲಕಾಲಕ್ಕೆ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.