ನವದೆಹಲಿ: ಮುದ್ರಣ, ಡಿಜಿಟಲ್, ಪ್ರಸಾರ ಮತ್ತು ಛಾಯಾಗ್ರಾಹಕ ವಿಭಾಗದಲ್ಲಿ ಪ್ರಭಾವ ಬೀರುವ ವರದಿಗಾರಿಕೆಗಾಗಿ ಐವರು ಪತ್ರಕರ್ತರು 2025ನೇ ಸಾಲಿನ ‘ಡ್ಯಾನಿಷ್ ಸಿದ್ದಿಕಿ ಪತ್ರಿಕೋದ್ಯಮ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಡ್ಯಾನಿಷ್ ಸಿದ್ದಿಕಿ ಅವರಿಗೆ ಗೌರವ ಸಲ್ಲಿಸಲು ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್ (ಐಐಸಿ)ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಹಸ್ತಾಂತರಿಸಲಾಯಿತು.
ವೀಸಾ ವಂಚನೆಯಿಂದ ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖಾ ವರದಿಗಾಗಿ ಆಸ್ಟ್ರೇಲಿಯಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ (ಎಬಿಸಿ) ಮೇಘನಾ ಬಾಲಿ, ಭಾರತದ ಹಿಂದುಳಿದ ಸಮುದಾಯಗಳ ಬಗ್ಗೆ ‘ದಿ ಲಾಸ್ಟ್ ಮ್ಯಾನ್’ ಎಂಬ ಹಿಂದಿ ಸರಣಿ ರೂಪಿಸಿದ್ದ ಬಿಬಿಸಿ ನ್ಯೂಸ್ ಇಂಡಿಯಾದ ಪತ್ರಕರ್ತೆ ಸರ್ವಪ್ರಿಯಾ ಸಂಗ್ವಾನ್ ಹಾಗೂ ಚಿತ್ರ ಸುದ್ದಿ ಮೂಲಕ ಮಹಾರಾಷ್ಟ್ರದ ಸಕ್ಕರೆ ಉದ್ಯಮದಲ್ಲಿ ಮಹಿಳೆಯರ ಶೋಷಣೆ ಬಗ್ಗೆ ಬೆಳಕು ಚೆಲ್ಲಿದ್ದ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಛಾಯಾಗ್ರಾಹಕಿ ಸೌಮ್ಯ ಖಾಂಡೇವಾಲ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಣಿಪುರದ ಹಿಂಸಾಚಾರದ ಗುಂಪುಗಳ ಕುರಿತು ‘ದಿ ಕಾರವಾನ್’ನಲ್ಲಿ ತನಿಖಾ ವರದಿ ಪ್ರಕಟಿಸಿದ ಪತ್ರಕರ್ತೆ ಗ್ರೀಷ್ಮಾ ಕುಥಾರ್ ಹಾಗೂ ಗ್ರೇಟ್ ನಿಕೋಬಾರ್ ದ್ವೀಪದ ಮೇಲೆ ಅಭಿವೃದ್ಧಿಯ ಸಾಮಾಜಿಕ ಪರಿಣಾಮ ಮತ್ತು ಪರಿಸರದ ಬಗ್ಗೆ ವಿಸ್ತೃತ ವರದಿ ಮಾಡಿದ ‘ಸ್ಕ್ರಾಲ್.ಇನ್’ ವೆಬ್‌ಸೈಟ್‌ನ ವೈಷ್ಣವಿ ರಾಥೋಡ್ ಅವರಿಗೂ ಪ್ರಶಸ್ತಿ ಸಂದಿದೆ.
ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ‘ಫ್ರಂಟ್‌ಲೈನ್’ ಸಂಪಾದಕ ವೈಷ್ಣ ರಾವ್, ರಾಯಿಟರ್ಸ್ ಪಿಕ್ಚರ್ಸ್‌ನ ಗ್ಯಾಬ್ರಿಯೆಲ್ ಫೊನ್ಸೆಕಾ ಅವರು ಪ್ರಶಸ್ತಿಯ ತೀರ್ಪುಗಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.