ದಿಬ್ರುಗಢ (ಅಸ್ಸಾಂ): ಅಸ್ಸಾಂನ ದಿಬ್ರುಗಢ ಜಿಲ್ಲೆಯಲ್ಲಿ ಐದು ತಿಂಗಳ ಗರ್ಭಿಣಿ ಶಿಕ್ಷಕಿಯೊಬ್ಬರು ಶಾಲೆಯಲ್ಲಿ ಕಳಪೆ ಶೈಕ್ಷಣಿಕ ಸಾಧನೆ ಮತ್ತು ನಡವಳಿಕೆಯ ಕುರಿತು ಪೋಷಕರ ಗಮನಕ್ಕೆ ತಂದ ಕಾರಣಕ್ಕೆ ವಿದ್ಯಾರ್ಥಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ.
ಮೋರನ್ ಪ್ರದೇಶದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ 10ಮತ್ತು 11ನೇ ತರಗತಿಯ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿರುವುದಾಗಿ‘ಎನ್‌ಡಿಟಿವಿ’ ವರದಿ ಮಾಡಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ನಡವಳಿಕೆ ಬಗ್ಗೆ ಪೋಷಕರೊಂದಿಗೆ ಭಾನುವಾರ ಸಂಜೆ ಸಭೆ ನಡೆಸಲಾಗಿತ್ತು.ಇದೇ ವೇಳೆ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿರುವ ಬಗ್ಗೆಪೋಷಕರಿಗೆಶಿಕ್ಷಕಿದೂರು ನೀಡಿದ್ದರು.
ಸಭೆ ಮುಗಿದ ಬಳಿಕ ಕೆಲವು ವಿದ್ಯಾರ್ಥಿಗಳು ಗುಂಪುಗೂಡಿ ಗರ್ಭಾವಸ್ಥೆಯಲ್ಲಿದ್ದ ಶಿಕ್ಷಕಿಯತಲೆಗೂದಲನ್ನು ಹಿಡಿದು ಎಳೆದಾಡಿದ್ದು, ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಶಿಕ್ಷಕಿಯನ್ನು ಶಾಲಾ ಸಿಬ್ಬಂದಿಗಳು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
‘ಪ್ರಕರಣದಲ್ಲಿ 10 ಮತ್ತು 11ನೇ ತರಗತಿಯ 22 ವಿದ್ಯಾರ್ಥಿಗಳು ಭಾಗಿಯಾಗಿರುವುದು ದೃಢಪಟ್ಟಿದೆ. ಸದ್ಯ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಜತೆಗೆ ಪೋಷಕರಿಗೂ ಮಾಹಿತಿ ನೀಡಲಾಗಿದೆ’ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಏತನ್ಮಧ್ಯೆ, ನವೋದಯ ವಿದ್ಯಾಲಯ ಸಮಿತಿಯ ಉಪ ಆಯುಕ್ತ (ಈಶಾನ್ಯ) ಕೆ.ವಿ. ಸುರೇಶ್ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದು ‘ಅತ್ಯಂತ ದುರದೃಷ್ಟಕರ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.