ಕತಾರ್‌ನ ದೋಹಾದಲ್ಲಿ ಅಮೆರಿಕ ನೆಲೆ ಮೇಲೆ ಇರಾನ್ ದಾಳಿ
(ರಾಯಿಟರ್ಸ್ ಚಿತ್ರ)
ಕೊಚ್ಚಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಆತಂಕದಿಂದಾಗಿ ಕತಾರ್‌ನ ವಾಯುಪ್ರದೇಶ ಮುಚ್ಚಲಾಗಿದೆ. ಇದರಿಂದ ಸೋಮವಾರ ಮಧ್ಯರಾತ್ರಿ ಕೇರಳದ ಕೊಚಿನ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳು ವಿಳಂಬವಾದವು. ಕೆಲ ವಿಮಾನಗಳ ಸಂಚಾರ ರದ್ದು ಅಥವಾ ಮಾರ್ಗ ಬದಲಾವಣೆ ಮಾಡಲಾಯಿತು.
ಅಮೆರಿಕದ ಮೇಲೆ ಇರಾನ್ ಪ್ರತಿ ದಾಳಿಗೆ ಸಜ್ಜಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಕತಾರ್ ತನ್ನ ವಾಯುಪ್ರದೇಶ ಮುಚ್ಚಿದೆ.
ಸೋಮವಾರ ಸಂಜೆ 6.30ಕ್ಕೆ ದೋಹಾಕ್ಕೆ ಹೊರಟಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಮಸ್ಕತ್‌ಗೆ ಕಡೆಗೆ ತಿರುಗಿಸಲಾಯಿತು. ಮಧ್ಯರಾತ್ರಿ 12.53ಕ್ಕೆ ನಿಗದಿಯಾಗಿದ್ದ ಏರ್ ಇಂಡಿಯಾದ ದೋಹಾ ವಿಮಾನ ಸಂಚಾರ ರದ್ದಾಯಿತು. ಅಬುದಾಬಿಗೆ ತೆರಳುತ್ತಿದ್ದ ಇತಿಹಾದ್ ವಿಮಾನ ವಾಪಸಾಯಿತು.
‘ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ. ಕತಾರ್‌ಗೆ ಯಾವುದೇ ವಿಮಾನ ಸಂಚರಿಸುತ್ತಿಲ್ಲ. ಕತಾರ್‌ನಲ್ಲಿ ಏರ್ ಇಂಡಿಯಾದ ಯಾವುದೇ ವಿಮಾನ ಇಳಿದಿಲ್ಲ’ ಎಂದು ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.