ADVERTISEMENT

Northeast Floods | ಈಶಾನ್ಯ ರಾಜ್ಯಗಳಲ್ಲಿ ಮುಂದುವರಿದ ಪ್ರವಾಹ

ಅರುಣಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ; 33 ಸಾವಿರ ಮಂದಿ ಬಾಧಿತರು: ಇದುವರೆಗೆ 12 ಮಂದಿ ಸಾವು

ಪಿಟಿಐ
Published 5 ಜೂನ್ 2025, 15:54 IST
Last Updated 5 ಜೂನ್ 2025, 15:54 IST
<div class="paragraphs"><p>ಅಸ್ಸಾಂನ ಗುವಾಹಟಿಯ ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ಜನರು ಹರಸಾಹಸ ಪಟ್ಟರು&nbsp; </p></div>

ಅಸ್ಸಾಂನ ಗುವಾಹಟಿಯ ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ಜನರು ಹರಸಾಹಸ ಪಟ್ಟರು 

   

–ಪಿಟಿಐ ಚಿತ್ರ 

ಇಟಾನಗರ, ಗುವಾಹಟಿ,: ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಅರುಣಾಚಲ ಪ್ರದೇಶದಲ್ಲಿ ಗುರುವಾರವೂ ವ್ಯಾಪಕ ಮಳೆಯಾಗಿದ್ದು, 24 ಜಿಲ್ಲೆಗಳಲ್ಲಿ 33 ಸಾವಿರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಈ ವರ್ಷ ಮುಂಗಾರು ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ನಾಪತ್ತೆಯಾದ ವ್ಯಕ್ತಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್‌ಇಒಸಿ) ವರದಿ ತಿಳಿಸಿದೆ.

ವಿವಿಧ ಜಿಲ್ಲೆಗಳ 214 ಹಳ್ಳಿಗಳು ಭೂಕುಸಿತ ಹಾಗೂ ಪ್ರವಾಹದಿಂದ ತೊಂದರೆಗೆ ಸಿಲುಕಿವೆ. ಪ್ರಮುಖ ನದಿ ಹಾಗೂ ಉಪನದಿಗಳು ಸಾಮಾನ್ಯ ಮಟ್ಟವನ್ನೂ ಮೀರಿ ಹರಿಯುತ್ತಿವೆ. ರಾಜ್ಯದ್ಯಾದ್ಯಂತ 481 ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ 335 ಕೋಳಿಗಳು ಹಾಗೂ 97 ಪ್ರಾಣಿಗಳು ಸೇರಿದಂತೆ ಒಟ್ಟು 432 ಜಾನುವಾರುಗಳು ಮೃತಪಟ್ಟಿವೆ.

ಕಳೆದ 24 ಗಂಟೆಗಳಲ್ಲಿ ವಿವಿಧ ಜಿಲ್ಲೆಗಳಿಂದ ಭೂಕುಸಿತ ಹಾಗೂ ಪ್ರವಾಹ ಸಂಬಂಧಿ ಅವಘಡಗಳು ವರದಿಯಾಗಿವೆ. ಚಾಂಗ್‌ಲಾಂಗ್‌ ಅತಿ ಹೆಚ್ಚು ಬಾಧಿತ ಜಿಲ್ಲೆಯಾಗಿದ್ದು, ಆರು ಗ್ರಾಮಗಳು ಜಲಾವೃತಗೊಂಡಿದ್ದು, 2,231 ಮಂದಿ ನಿರಾಶ್ರಿತರಾಗಿದ್ದಾರೆ. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸಿಬ್ಬಂದಿ ಸಂಕಷ್ಟದಲ್ಲಿ ಸಿಲುಕಿರುವ ಜನರ ಸ್ಥಳಾಂತರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅಸ್ಸಾಂನಲ್ಲೂ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, 21 ಜಿಲ್ಲೆಗಳಲ್ಲಿನ 7 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಸಂಬಂಧಿಸಿದ ಅವಘಢಗಳಲ್ಲಿ ಇದುವರೆಗೆ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿದೆ. ಬ್ರಹ್ಮಪುತ್ರ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಸಿಕ್ಕಿಂ:63 ಪ್ರವಾಸಿಗರ ರಕ್ಷಣೆ

ಗ್ಯಾಂಗ್ಟಕ್: ಭಾರಿ ಮಳೆಯಿಂದ ಕಳೆದೊಂದು ವಾರದಿಂದ ಉತ್ತರ ಸಿಕ್ಕಿಂನ ಲಾಛೂಂಗ್‌ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 63 ಪ್ರವಾಸಿಗರನ್ನು ಹೆಲಿಕಾಪ್ಟರ್‌ ಮೂಲಕ ಗ್ಯಾಂಗ್ಟಕ್‌ಗೆ ಕರೆ ತರಲಾಯಿತು. ಹವಾಮಾನ ತಿಳಿಯಾದ ತಕ್ಷಣವೇ ಚಾಟೆನ್‌ನಲ್ಲಿ ಸಿಲುಕಿದವರನ್ನು ಎರಡು ಎಂಐ–17ವಿ5 ಹೆಲಿಕಾಪ್ಟರ್‌ಗಳ ಮೂಲಕ ಗ್ಯಾಂಗ್ಟಕ್‌ನ ಪಾಕ್ಯೊಂಗ್‌ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ರಕ್ಷಿಸಿದವರ ಪೈಕಿ ಇಬ್ಬರು ವಿದೇಶಿಯರು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.