ADVERTISEMENT

ಫೇಸ್‌ಬುಕ್‌ನಲ್ಲಿ ದೇಶ ವಿರೋಧಿ ಪೋಸ್ಟ್‌: ಪತ್ರಕರ್ತೆ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 13:07 IST
Last Updated 20 ಏಪ್ರಿಲ್ 2020, 13:07 IST

ಶ್ರೀನಗರ: ಫೇಸ್‌ಬುಕ್‌ನಲ್ಲಿ ಉಗ್ರರ ಸಮರ್ಥಿಸುವ ಹೇಳಿಕೆಯನ್ನು ಪೋಸ್ಟ್‌ ಮಾಡಿದ ಆರೋಪದ ಮೇಲೆ ಹವ್ಯಾಸಿ ಪತ್ರಕರ್ತೆಯೊಬ್ಬರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಫೋಟೊಜರ್ನಲಿಸ್ಟ್‌ ಮಿಶ್ರಫ್‌ ಜಹ್ರಾ (26) ಅವರ ವಿರುದ್ದ ದೇಶ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಆರೋಪದ ಮೇಲೆ ಯುಎಪಿಎ ಸೆಕ್ಷನ್‌ 13 ಎ (ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ) ಹಾಗೂ ಐಪಿಸಿ 505ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸೈಬರ್‌ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ತಹಿರ್‌ ಆಶ್ರಫ್‌ ತಿಳಿಸಿದ್ದಾರೆ.

ಪತ್ರಕರ್ತೆಯು ಹಾಕಿರುವ ಫೋಸ್ಟ್‌ ಉಗ್ರರನ್ನು ವೈಭವಿಕರಿಸಿದಲ್ಲದೇ ಸಮಾಜದಲ್ಲಿ ತಪ್ಪು ಮಾಹಿತಿ ಹರಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುತ್ತದೆ. ಹಾಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಆಶ್ರಫ್‌ ತಿಳಿಸಿದರು.

ADVERTISEMENT

‘ನನ್ನನ್ನು ಪೊಲೀಸ್‌ ಠಾಣೆಗೆ ಬರುವಂತೆ ಪೊಲೀಸರು ತಿಳಿಸಿದ್ದಾರೆ. ಫೇಸ್‌ಬುಕ್‌ನ ನನ್ನ ಯಾವ ಪೋಸ್ಟ್‌ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ’ ಎಂದು ಪತ್ರಕರ್ತೆ ಮಿಶ್ರಫ್‌ ಜಹ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹವ್ಯಾಸಿ ಪತ್ರಕರ್ತೆಯಾಗಿರುವ ಜಹ್ರಾ ಅವರು ವಾಷಿಂಗ್ಟನ್‌ ಪೋಸ್ಟ್‌, ಅಲ್‌ ಜಝೀರಾ, ಕಾರವಾನ್‌ ಸೇರಿದಂತೆ ಹಲವು ಅಂತರ ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದಾರೆ. ಯುಎಪಿಎ ಅಡಿ ಪತ್ರಕರ್ತೆ ಮೇಲೆ ಪ್ರಕರಣ ದಾಖಲಾಗುತ್ತಿರುವುದು ಎರಡನೇ ಬಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.