ADVERTISEMENT

2024ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲು 2022ರಲ್ಲಿ ಯೋಗಿ ಸಿಎಂ ಆಗಬೇಕು: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 13:29 IST
Last Updated 29 ಅಕ್ಟೋಬರ್ 2021, 13:29 IST
ಲಖನೌದಲ್ಲಿ ‘ನಮ್ಮ ಪರಿವಾರ, ಬಿಜೆಪಿ ಪರಿವಾರ’ ಅಭಿಯಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಕ್ಷದ ಕಾರ್ಯಕರ್ತರು ಇದ್ದರು. ಪಿಟಿಐ ಚಿತ್ರ.
ಲಖನೌದಲ್ಲಿ ‘ನಮ್ಮ ಪರಿವಾರ, ಬಿಜೆಪಿ ಪರಿವಾರ’ ಅಭಿಯಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಕ್ಷದ ಕಾರ್ಯಕರ್ತರು ಇದ್ದರು. ಪಿಟಿಐ ಚಿತ್ರ.   

ಲಖನೌ: 2024ರಲ್ಲಿ ಪ್ರಧಾನಿ ಮೋದಿಯವರು ಮತ್ತೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು 2022ರಲ್ಲಿ ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾಗಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಹೇಳಿದ್ದಾರೆ.

ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯೋಗಿ ಅವರ ಮುಖದ ಬಗ್ಗೆ ಹರಿದಾಡಿದ ಊಹಾಪೋಹಗಳಿಗೆ ಅವರು ತಿರುಗೇಟು ನೀಡಿದರು.

ಇಲ್ಲಿಯ ಡಿಫೆನ್ಸ್‌ ಎಕ್ಸ್‌ಪೋ ಮೈದಾನದಲ್ಲಿ ಬಿಜೆಪಿಯ ಸದಸ್ಯ ವಿಸ್ತರಣಾ ಅಭಿಯಾನಕ್ಕೆ ಚಾಲನೆ ನೀಡಿ ಬಿಜೆಪಿಯ ಸಂಚಾಲಕರು ಮತ್ತು ಅವಧ್‌ ಪ್ರದೇಶದ ಪಕ್ಷದ ಉಸ್ತುವಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದರು.

ADVERTISEMENT

‘ನಮ್ಮ ಪರಿವಾರ, ಬಿಜೆಪಿ ಪರಿವಾರ’ ಎಂಬ ಘೋಷವಾಕ್ಯವನ್ನು ಅವರು ಇದೇ ವೇಳೆ ಅನಾವರಣಗೊಳಿಸಿದರು.

‘ಮೋದಿ ಅವರು ಪ್ರಧಾನಿಯಾಗಿದ್ದಾಗ ಉತ್ತರ ಪ್ರದೇಶಕ್ಕೆ ಬೇಕಾದ ಎಲ್ಲವನ್ನೂ ಮಾಡುತ್ತಾರೆ. ಆದ್ದರಿಂದ ಮೋದಿ ಅವರ ನೇತೃತ್ವದಲ್ಲಿ 2024ರ ಲೋಕಸಭೆ ಚುನಾವಣೆಯನ್ನು ಮತ್ತೊಮ್ಮೆ ಗೆಲ್ಲಬೇಕು. ಅದಕ್ಕಾಗಿ ಇಲ್ಲಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿದೆ’ ಎಂದು ಅಮಿತ್‌ ಶಾ ಹೇಳಿದರು.

‘ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕಿದೆ. ಅದಕ್ಕಾಗಿ ಯೋಗಿ ಅವರನ್ನು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಂದು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ’ ಎಂದು ಅವರು ಹೇಳಿದರು.

2014, 2017 ಮತ್ತು 2019ರ ಚುನಾವಣೆಗಳಿಗೆ ಮೊದಲೇಬಿಜೆಪಿಯ ಸದಸ್ಯತ್ವ ವಿಸ್ತರಣೆ ಅಭಿಯಾನವನ್ನು ಆರಂಭಿಸಲಾಗಿದೆ. 2022ರ ಚುನಾವಣೆಗೆ ಶುಕ್ರವಾರದಿಂದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಶಾ ಹೇಳಿದರು.

‘ರಾಜ್ಯದಲ್ಲಿ ಸರ್ಕಾರ ರಚನೆಯಾಗಿರುವುದು ಕುಟುಂಬಕ್ಕಾಗಿ ಅಲ್ಲ, ಬಡವರ ಅಭಿವೃದ್ಧಿಗೆ ಎಂದು ಬಿಜೆಪಿಯು ಮೊದಲ ಬಾರಿಗೆ ಸಾಬೀತುಪಡಿಸಿದೆ’ ಎಂದು ಶಾ ಅವರು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

‘ಚುನಾವಣಾ ಘೋಷಣೆಗಳು ಮೊಳಗಿದ ನಂತರ ಮನೆಯಲ್ಲಿ ಕುಳಿತಿದ್ದವರು ತಮ್ಮ ಸರ್ಕಾರ ರಚನೆಯಾಗಲಿದೆ ಎಂದು ಬಿಂಬಿಸಲು ಹೊಸ ಬಟ್ಟೆ ತೊಟ್ಟಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸೇರಿದಂತೆ ವಿರೋಧ ಮುಖಂಡರನ್ನು ಅಮಿತ್‌ ಲೇವಡಿ ಮಾಡಿದರು.

‘ಅಖಿಲೇಶ್‌ ಅವರು ಈ ಐದು ವರ್ಷಗಳಲ್ಲಿ ತಾವು ಎಷ್ಟು ಬಾರಿ ವಿದೇಶದಲ್ಲಿದ್ದರು ಎಂಬ ದಾಖಲೆಯನ್ನು ಉತ್ತರ ಪ್ರದೇಶದ ಜನರಿಗೆ ನೀಡಬೇಕು’ ಎಂದು ಶಾ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.