ನವದೆಹಲಿ: ‘ದೇಶ ವಿರೋಧಿ ಕೃತ್ಯಗಳಲ್ಲಿ ಶಿಕ್ಷೆಗೊಳಗಾದ, ಬೇಹುಗಾರಿಕೆ, ಅತ್ಯಾಚಾರ, ಕೊಲೆ, ಭಯೋತ್ಪಾದಕ ಕೃತ್ಯ, ಮಕ್ಕಳ ಕಳ್ಳ ಸಾಗಣೆಯಲ್ಲಿ ಶಿಕ್ಷೆ ಅನುಭವಿಸಿದ ವಿದೇಶಿಯರಿಗೆ ಭಾರತದ ಒಳಗೆ ಪ್ರವೇಶಿಸಲು ಅಥವಾ ದೇಶದಲ್ಲಿ ನೆಲಸಲು ನಿರ್ಬಂಧ ಹೇರಲಾಗುತ್ತದೆ’ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
‘ಇತ್ತೀಚಿಗೆ ಮಂಡಿಸಿದ ವಲಸೆ ಹಾಗೂ ವಿದೇಶಿಗರ ಕಾಯ್ದೆ–2025 ಅನ್ವಯ, ವಿದೇಶಿಗರನ್ನು ಗಡಿಪಾರು ಮಾಡುವ ತನಕ ಅವರ ಚಲನವಲನದ ಮೇಲೆ ನಿಗಾ ವಹಿಸಲು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರತ್ಯೇಕವಾದ ಬಂಧನ ಕೇಂದ್ರವನ್ನು ಸ್ಥಾಪಿಸಬೇಕು’ ಎಂದು ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
‘ಯಾವುದೇ ಮಾದರಿಯ ವೀಸಾ ಸಲ್ಲಿಸುವ ವ್ಯಕ್ತಿ ಅಥವಾ ಭಾರತದ ಸಾಗರೋತ್ತರ ನಾಗರಿಕ ಕಾರ್ಡ್ ಹೊಂದಿರುವ ವ್ಯಕ್ತಿಯು ಬಯೋಮೆಟ್ರಿಕ್ ಮಾಹಿತಿಯನ್ನು ವೀಸಾ ನೀಡುವ ಸಂಸ್ಥೆಗೆ ಸಲ್ಲಿಸಬೇಕು. ಅವರ ಎಲ್ಲ ಮಾಹಿತಿಯನ್ನು ಪರಿಶೀಲಿಸಿದ ಬಳಿಕವೇ ವೀಸಾ ನೀಡಬೇಕು. ಅಕ್ರಮ ವಲಸಿಗರು ಬಂಧನದಲ್ಲಿದ್ದರೆ, ಅವರ ಚಟುವಟಿಕೆಗಳ ನಿಯಂತ್ರಿಸಲು ಬಂಧನ ಕೇಂದ್ರ ಅಥವಾ ಶಿಬಿರದಲ್ಲಿಡಬೇಕು’ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.