ADVERTISEMENT

ಬಿಹಾರ ವಿಧಾನಸಭೆಯ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಸದಾನಂದ ಸಿಂಗ್ ನಿಧನ

ಪಿಟಿಐ
Published 8 ಸೆಪ್ಟೆಂಬರ್ 2021, 8:33 IST
Last Updated 8 ಸೆಪ್ಟೆಂಬರ್ 2021, 8:33 IST
ಹಿರಿಯ ಕಾಂಗ್ರೆಸ್ ನಾಯಕ ಸದಾನಂದ ಸಿಂಗ್ (ಚಿತ್ರ: PRS website/prsindia.org)
ಹಿರಿಯ ಕಾಂಗ್ರೆಸ್ ನಾಯಕ ಸದಾನಂದ ಸಿಂಗ್ (ಚಿತ್ರ: PRS website/prsindia.org)   

ಪಾಟ್ನಾ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಹಾರ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸದಾನಂದ ಸಿಂಗ್ ಅವರು ಬುಧವಾರ ನಿಧನರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅವರಿಗೆ 76 ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿಗಿಂತ ಹೆಚ್ಚು ಕಾಲ ದಾಖಲಾಗಿದ್ದ ಇಲ್ಲಿನ ಆಸ್ಪತ್ರೆಯಲ್ಲಿ ಸಿಂಗ್ ಕೊನೆಯುಸಿರೆಳೆದಿದ್ದಾರೆ.

ಕಟ್ಟಾ ಕಾಂಗ್ರೆಸ್ಸಿಗರಾಗಿದ್ದ ಸಿಂಗ್, 1972 ರಲ್ಲಿ ಕಹಲ್‌ಗಾಂವ್ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದಿದ್ದರು. ಐದು ದಶಕಗಳ ರಾಜಕೀಯ ಜೀವನದಲ್ಲಿ ಹಲವಾರು ಬಾರಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ADVERTISEMENT

ಒಬಿಸಿ – ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ನಾಯಕರಾಗಿದ್ದರು. ಇದೇ ಕಾರಣಕ್ಕೆ ಆರ್‌ಜೆಡಿ ಜೊತೆಗೆ ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬಂದಾಗ 2000ರಲ್ಲಿ ಸಿಂಗ್ ಅವರನ್ನ ಬಿಹಾರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕಾಗಿ ಆಯ್ಕೆ ಮಾಡಿತು.

ನಂತರ, ಅವರು ರಾಜ್ಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದರು. ಆದರೆ ಕಳೆದ ವರ್ಷ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರು. ಬಳಿಕ ಅವರ ಮಗ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಎದುರು ಸೋಲುಂಡರು.

ಸಿಂಗ್ ಅವರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ಜಿತನ್ ರಾಮ್ ಮಾಂಝಿ ಹಾಗೂ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.