ADVERTISEMENT

ಕುತೂಹಲ ಮೂಡಿಸಿದ ಶಾ–ಕ್ಯಾಪ್ಟನ್ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2021, 19:46 IST
Last Updated 29 ಸೆಪ್ಟೆಂಬರ್ 2021, 19:46 IST
   

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬುಧವಾರ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ 11 ದಿನಗಳ ನಂತರ ಅವರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ.

ಅಮಿತ್ ಶಾ ಅವರ ದೆಹಲಿಯ ನಿವಾಸಕ್ಕೆ ತೆರಳಿದ ಅಮರಿಂದರ್ ಸಿಂಗ್ ಅವರು, ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಆನಂತರ ಅಲ್ಲಿಂದ ಬೇರೊಂದು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅವರ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ.

ಸಭೆಯ ಬಗ್ಗೆ ಅಮರಿಂದರ್ ಅವರ ಮಾಧ್ಯಮ ಸಲಹೆಗಾರರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ‘ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಶಾ ಅವರ ಜತೆ ಅಮರಿಂದರ್ ಚರ್ಚಿಸಿದರು. ಕಾಯ್ದೆಗಳನ್ನು ಶೀಘ್ರವೇ ರದ್ದುಪಡಿಸಿ ಎಂದು ಒತ್ತಾಯಿಸಿದರು’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚಿಸಲೆಂದೇ ಶಾ ಅವರನ್ನು ಅಮರಿಂದರ್‌ ಭೇಟಿ ಮಾಡಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಎಚ್ಚರಿಕೆ ರವಾನಿಸಲೆಂದೇ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದೂ ಕೆಲವು ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.