ADVERTISEMENT

ತಮಿಳುನಾಡು ಮಾಜಿ ಸಚಿವ, ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಮೊಹಮ್ಮದ್ ಜಾನ್ ನಿಧನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 15:27 IST
Last Updated 23 ಮಾರ್ಚ್ 2021, 15:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ತಮಿಳುನಾಡಿನ ಮಾಜಿ ಸಚಿವ ಮತ್ತು ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಮೊಹಮ್ಮದ್ ಜಾನ್ (72) ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯಕ್ಕೀಡಾದ ನಂತರ, ಸಂಸದರನ್ನು ರಾಣಿಪೇಟೆ ಜಿಲ್ಲೆಯ ವಾಲಾಜಪೇಟೆ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗೆ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಮೃತರ ಸಂಬಂಧಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, 'ಅವರು ವಿಧಾನಸಭಾ ಚುನಾವಣೆಯ ಪ್ರಚಾರದ ನಂತರ ಮನೆಗೆ ಹಿಂದಿರುಗಿದ್ದರು.ಎದೆ ನೋವು ಎಂದು ಹೇಳಿದ ನಂತರ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಮತ್ತು ದಾರಿಯಲ್ಲಿ ಅವರು ಪ್ರಜ್ಞೆ ಕಳೆದುಕೊಂಡರು. ವೈದ್ಯರು, ಪರೀಕ್ಷೆಯ ನಂತರ, ಅವರು ಹೃದಯಾಘಾತದಿಂದ ನಿಧನರಾಗಿರುವುದಾಗಿ ಹೇಳಿದರು' ಎಂದು ಪಿಟಿಐಗೆ ತಿಳಿಸಿದರು.

ADVERTISEMENT

ದಿ. ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಂಪುಟದಲ್ಲಿ ಮೊಹಮ್ಮದ್ ಜಾನ್ ಅವರು 2011-13ರ ನಡುವೆ ಹಿಂದುಳಿದ ವರ್ಗಗಳ ಸಚಿವರಾಗಿದ್ದರು. ಉತ್ತರ ತಮಿಳುನಾಡಿನ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ಎಐಎಡಿಎಂಕೆ ನಾಯಕರಾಗಿದ್ದ ಅವರು, 2019ರ ಜುಲೈನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅಲ್ಲದೆ ತಮಿಳುನಾಡು ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದರು ಮತ್ತು ಎಐಎಡಿಎಂಕೆ ಅಲ್ಪಸಂಖ್ಯಾತರ ಕಲ್ಯಾಣ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದರು.

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಸೇರಿದಂತೆ ಎಐಎಡಿಎಂಕೆಯ ಹಲವು ನಾಯಕರು ಮೊಹಮ್ಮದ್ ಜಾನ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

1972 ರಲ್ಲಿ ಎಐಎಡಿಎಂಕೆ ಸ್ಥಾಪನೆಯಾದ ಆರಂಭದಿಂದಲೂ ಪಕ್ಷದ ಕಾರ್ಯಕರ್ತರಾಗಿದ್ದ ಅವರು, ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಮತ್ತು ದಿವಂಗತ ಮುಖ್ಯಮಂತ್ರಿ 'ಅಮ್ಮ' (ಜೆ. ಜಯಲಲಿತಾ) ಅವರಿಗೆ ನಿಷ್ಠರಾಗಿದ್ದರು. ಅವರು ಪಕ್ಷದ ರಾಣಿಪೇಟೆ ಪಟ್ಟಣ ಕಾರ್ಯದರ್ಶಿ ಸೇರಿದಂತೆ ವಿವಿಧ ಹಂತಗಳಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಮೊಹಮ್ಮದ್‌ಜಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ರಾಜ್ಯಸಭೆಯಲ್ಲಿ ತಮಿಳುನಾಡಿನ ಧ್ವನಿಯಾಗಿದ್ದರು ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.