ADVERTISEMENT

ಅಗ್ನಿವೀರರಿಗೆ ಉದ್ಯೋಗದ ಆಫರ್‌: ಆನಂದ್‌ ಮಹೀಂದ್ರಾಗೆ ಎದುರಾದ ಅಂಕಿಅಂಶದ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2022, 10:20 IST
Last Updated 21 ಜೂನ್ 2022, 10:20 IST
ಉದ್ಯಮಿ ಆನಂದ್‌ ಮಹೀಂದ್ರಾ
ಉದ್ಯಮಿ ಆನಂದ್‌ ಮಹೀಂದ್ರಾ   

ಬೆಂಗಳೂರು: ಉದ್ಯಮಿ ಆನಂದ್‌ ಮಹೀಂದ್ರಾ ಅವರು ಅಗ್ನಿಪಥ ಯೋಜನೆಯಡಿ ಅಗ್ನಿವೀರರಾಗಿ ಹೊರಬರುವ ಯುವಕರಿಗೆ ಮಹೀಂದ್ರಾ ಗ್ರೂಪ್‌ ಕಂಪನಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಬೆನ್ನಲ್ಲೇ, ಎಷ್ಟು ನಿವೃತ್ತ ಯೋಧರಿಗೆ ಕೆಲಸ ನೀಡಲಾಗಿದೆ ಎಂಬ ಅಂಕಿಅಂಶಗಳ ಪ್ರಶ್ನೆಗಳು ಎದುರಾಗಿವೆ.

ಭಾರತೀಯ ಸೇನೆಯಲ್ಲಿದ್ದ ಉನ್ನತ ಅಧಿಕಾರಿಗಳು ಸೇರಿದಂತೆ ಹಲವರು ಆನಂದ್‌ ಮಹೀಂದ್ರಾ ಅವರಿಗೆ ತಮ್ಮ ಕಂಪನಿಯಲ್ಲಿ ಇದುವರೆಗೆ ಎಷ್ಟು ಮಾಜಿ ಯೋಧರಿಗೆ ಉದ್ಯೋಗವನ್ನು ಕಲ್ಪಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

'ಈ ಯೋಜನೆ ಬರುವ ವರೆಗೆ ಏಕೆ ಕಾಯಬೇಕು? ಪ್ರತಿ ವರ್ಷ ಕೌಶಲ ಹೊಂದಿದ, ಶಿಸ್ತಿನ ಮಾಜಿ ಯೋಧರು (ಜವಾನರು ಮತ್ತು ಅಧಿಕಾರಿಗಳು) ಸಾವಿರಾರು ಸಂಖ್ಯೆಯಲ್ಲಿ ನಿವೃತ್ತರಾಗುತ್ತಿದ್ದಾರೆ ಮತ್ತು ಗಂಭೀರವಾಗಿ 2ನೇ ವೃತ್ತಿಜೀವನವನ್ನು ಹುಡುಕುತ್ತಿದ್ದಾರೆ. ಇಂತವರಿಗೆ ನಿಮ್ಮ ಗ್ರೂಪ್‌ ಎಷ್ಟು ಸಹಕರಿಸಿದೆ ಎಂಬ ಅಂಕಿಅಂಶ ಕೊಟ್ಟಿದ್ದರೆ ಚೆನ್ನಾಗಿತ್ತು' ಎಂದು ನಿವೃತ್ತ ಭಾರತೀಯ ನೌಕಾ ಪಡೆ ಮುಖ್ಯಸ್ಥ ಮತ್ತು ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಮಾಜಿ ಅಧ್ಯಕ್ಷ ಅರುಣ್‌ ಪ್ರಕಾಶ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

'ಆನಂದ್‌ ಮಹೀಂದ್ರಾ ಸರ್‍‌, ನಿವೃತ್ತ ನೌಕಾ ಪಡೆ ಮುಖ್ಯಸ್ಥರು ವಿನಂತಿಸಿಕೊಂಡಿರುವ ಅಂಕಿಅಂಶವು ನಮಗೆ ಸಿಗುತ್ತದೆಯೇ? ನಾನು 40 ವರ್ಷಗಳ ಸೇವೆಯ ಬಳಿಕ ಇಂತಹ ಭರವಸೆಗಳನ್ನು ಕೇಳಿ ನಿವೃತ್ತನಾಗಿದ್ದೇನೆ' ಎಂದು ಭಾರತೀಯ ವಾಯು ಪಡೆಯ ಮಾಜಿ ಏರ್‌ ವೈಸ್‌ ಮಾರ್ಷಲ್‌ ಮನಮೋಹನ್‌ ಬಹದ್ದೂರ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.