ADVERTISEMENT

Formula E-race: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ KTR

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2025, 16:10 IST
Last Updated 9 ಜನವರಿ 2025, 16:10 IST
<div class="paragraphs"><p>ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್ </p></div>

ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್

   

–ಪಿಟಿಐ ಚಿತ್ರ

ನವದೆಹಲಿ: ‘ಫಾರ್ಮುಲಾ ಇ– ರೇಸ್’ ಭ್ರಷ್ಟಾಚಾರ ಪ್ರಕರಣ ಸಂಬಂಧ ತೆಲಂಗಾಣ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಜನವರಿ 15ರಂದು ಅರ್ಜಿ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.

ಇದೇ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿದ ಎಫ್‌ಐಆರ್‌ ಅನ್ನು ರದ್ದು ಮಾಡಬೇಕು ಎಂದು ಕೆಟಿಆರ್‌ ಅವರು ತೆಲಂಗಾಣ ಹೈಕೋರ್ಟ್‌ ಅನ್ನು ಕೋರಿದ್ದರು. ಮಂಗಳವಾರ ಆದೇಶ ನೀಡಿದ್ದ ಹೈಕೋರ್ಟ್‌, ಎಫ್‌ಐಆರ್‌ ಅನ್ನು ರದ್ದು ಮಾಡಲು ನಿರಾಕರಿಸಿತ್ತು.

ಕೆ.ಟಿ. ರಾಮರಾವ್‌ ಅವರನ್ನು ವಿಚಾರಣೆ ನಡೆಸುವಾಗ ಅವರ ಪರ ವಕೀಲರೊಬ್ಬರು ಎಸಿಬಿ ಕಚೇರಿಯಲ್ಲಿ ಇರಲು ತೆಲಂಗಾಣ ಹೈಕೋರ್ಟ್‌ ಅನುಮತಿ ನೀಡಿತ್ತು. ಕೆಟಿಆರ್‌ ಅವರನ್ನು ಎಸಿಬಿ ವಿಚಾರಣೆಗೆ ಒಳಪಡಿಸುವ ಕೊಠಡಿಗೆ ವಕೀಲರು ಪ್ರವೇಶಿಸುವಂತಿಲ್ಲ. ಬೇರೊಂದು ಕೊಠಡಿಯಲ್ಲಿ ಕುಳಿತು ವಿಚಾರಣಾ ಪ್ರಕ್ರಿಯೆಯನ್ನು ವೀಕ್ಷಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಎಸಿಬಿ ವಿಚಾರಣೆ ವೇಳೆ ತಮ್ಮೊಂದಿಗೆ ವಕೀಲರೊಬ್ಬರು ಇರಲು ಅವಕಾಶ ನೀಡುವಂತೆ ಕೋರಿ ಕೆಟಿಆರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಕೆ. ಲಕ್ಷ್ಮಣ ಅವರು, ಕೆಟಿಆರ್‌ ಜೊತೆಗಿರಲು ಬಯಸುವ ವಕೀಲರ ಪಟ್ಟಿಯನ್ನು ನೀಡುವಂತೆ ಕೆಟಿಆರ್‌ ಪರ ವಕೀಲರಿಗೆ ಸೂಚಿಸಿದ್ದಾರೆ.

ಏನಿದು ಪ್ರಕರಣ: ತೆಲಂಗಾಣದಲ್ಲಿ ಹಿಂದಿನ ಬಿಆರ್‌ಎಸ್ ಸರ್ಕಾರ ಆಡಳಿತದಲ್ಲಿ ಪೌರಾಡಳಿತ ಸಚಿವರಾಗಿದ್ದ ಕೆ.ಟಿ.ರಾಮರಾವ್ ವಿರುದ್ಧ 2024ರ ಡಿಸೆಂಬರ್‌ನಲ್ಲಿ ಎಸಿಬಿ ಪ್ರಕರಣ ದಾಖಲಿಸಿತ್ತು. 2023ರಲ್ಲಿ ‘ಫಾರ್ಮುಲಾ ಇ’ ರೇಸ್‌ ನಡೆಸಲು ಅನುಮತಿಯಿಲ್ಲದೆ ವಿದೇಶಿ ಕರೆನ್ಸಿಯನ್ನು ಸಂಗ್ರಹಿಸಲಾಗಿದೆ ಎಂಬ ಆರೋಪ ಇದಾಗಿದೆ.

2023ರಲ್ಲಿ ಅರವಿಂದ್ ಕುಮಾರ್ ಅವರು ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ ವಹಿಸಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೆ.ಟಿ.ರಾಮರಾವ್ ಅವರನ್ನು ಪ್ರಮುಖ ಆರೋಪಿ (A-1) ಎಂದು ಎಸಿಬಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ಉಳಿದಂತೆ ಅರವಿಂದ್ ಕುಮಾರ್ ಅವರನ್ನು ಎರಡನೇ ಆರೋಪಿ ಮತ್ತು ನಿವೃತ್ತ ಅಧಿಕಾರಿ ಬಿ.ಎಲ್‌.ಎನ್. ರೆಡ್ಡಿ ಅವರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.

‘ಫಾರ್ಮುಲಾ ಇ’ ರೇಸ್‌ ಆಯೋಜನೆಗೆ ಸಂಬಂಧಿಸಿ ಸರ್ಕಾರದ ಬೊಕ್ಕಸಕ್ಕೆ ₹55 ಕೋಟಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 2024ರ ಫೆಬ್ರುವರಿಯಲ್ಲಿ ರೇಸ್‌ ನಡೆಯಬೇಕಿತ್ತು. ಆದರೆ, 2023ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ರದ್ದುಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.