ADVERTISEMENT

Formula E Race Case: ತೆಲಂಗಾಣ ACB ಎದುರು ವಿಚಾರಣೆಗೆ ಹಾಜರಾದ ಐಎಎಸ್ ಅಧಿಕಾರಿ

ಪಿಟಿಐ
Published 8 ಜನವರಿ 2025, 9:56 IST
Last Updated 8 ಜನವರಿ 2025, 9:56 IST
<div class="paragraphs"><p>ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)</p></div>

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)

   

ಹೈದರಾಬಾದ್: ‘ಫಾರ್ಮುಲಾ ಇ’ ರೇಸ್‌ಗೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಅವರು ಇಂದು (ಬುಧವಾರ) ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅರವಿಂದ್ ಕುಮಾರ್ ಅವರಿಗೆ ಎಸಿಬಿ ಸೂಚಿಸಿತ್ತು. ಹಾಗಾಗಿ ಅರವಿಂದ್‌ ಅವರು ಹೈದರಾಬಾದ್‌ನಲ್ಲಿ ಎಸಿಬಿ ಪ್ರಧಾನ ಕಚೇರಿಗೆ ಬಂದಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಹಿಂದಿನ ಬಿಆರ್‌ಎಸ್ ಸರ್ಕಾರ ಆಡಳಿತದಲ್ಲಿ ಪೌರಾಡಳಿತ ಸಚಿವರಾಗಿದ್ದ ಕೆ.ಟಿ.ರಾಮರಾವ್ ವಿರುದ್ಧ 2024ರ ಡಿಸೆಂಬರ್‌ನಲ್ಲಿ ಎಸಿಬಿ ಪ್ರಕರಣ ದಾಖಲಿಸಿತ್ತು. 2023ರಲ್ಲಿ ‘ಫಾರ್ಮುಲಾ ಇ’ ರೇಸ್‌ ನಡೆಸಲು ಅನುಮತಿಯಿಲ್ಲದೆ ವಿದೇಶಿ ಕರೆನ್ಸಿಯನ್ನು ಸಂಗ್ರಹಿಸಲಾಗಿದೆ ಎಂಬ ಆರೋಪ ಇದಾಗಿದೆ.

2023ರಲ್ಲಿ ಅರವಿಂದ್ ಕುಮಾರ್ ಅವರು ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ ವಹಿಸಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೆ.ಟಿ.ರಾಮರಾವ್ ಅವರನ್ನು ಪ್ರಮುಖ ಆರೋಪಿ (A-1) ಎಂದು ಎಸಿಬಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ಉಳಿದಂತೆ ಅರವಿಂದ್ ಕುಮಾರ್ ಅವರನ್ನು ಎರಡನೇ ಆರೋಪಿ ಮತ್ತು ನಿವೃತ್ತ ಅಧಿಕಾರಿ ಬಿ.ಎಲ್‌.ಎನ್. ರೆಡ್ಡಿ ಅವರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.

‘ಫಾರ್ಮುಲಾ ಇ’ ರೇಸ್‌ ಆಯೋಜನೆಗೆ ಸಂಬಂಧಿಸಿ ಸರ್ಕಾರದ ಬೊಕ್ಕಸಕ್ಕೆ ₹55 ಕೋಟಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 2024ರ ಫೆಬ್ರುವರಿಯಲ್ಲಿ ರೇಸ್‌ ನಡೆಯಬೇಕಿತ್ತು. ಆದರೆ, 2023ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ರದ್ದುಗೊಳಿಸಲಾಗಿತ್ತು.

ಇದೇ ಪ್ರಕರಣದಲ್ಲಿ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ (ಕೆಟಿಆರ್‌) ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಜ.16ರಂದು ತನಿಖೆಗೆ ಹಾಜರಾಗುವಂತೆ ಮಂಗಳವಾರ ಸಮನ್ಸ್‌ ನೀಡಿತ್ತು.

ಜ.7ರಂದು ತನಿಖೆಗೆ ಹಾಜರಾಗುವಂತೆ ಕೆಟಿಆರ್‌ ಅವರಿಗೆ ಈ ಹಿಂದೆ ಇ.ಡಿ. ಸಮನ್ಸ್‌ ನೀಡಿತ್ತು. ‘ತನಿಖೆಗೆ ಹಾಜರಾಗಲು ಎರಡು ವಾರಗಳ ಅವಕಾಶ ನೀಡಬೇಕು ಎಂದು ಕೆಟಿಆರ್‌ ಅವರು ಮನವಿ ಮಾಡಿದ್ದಾರೆ. ಆದ್ದರಿಂದ, ಈಗ ಮತ್ತೊಮ್ಮೆ ಸಮನ್ಸ್‌ ನೀಡಲಾಗಿದೆ’ ಎಂದು ಮೂಲಗಳು ಹೇಳಿವೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ದಾಖಲಿಸಿದ ಎಫ್‌ಐಆರ್‌ ಅನ್ನು ರದ್ದು ಮಾಡಬೇಕು ಎಂದು ಕೆಟಿಆರ್‌ ಅವರು ತೆಲಂಗಾಣ ಹೈಕೋರ್ಟ್‌ಗೆ ಕೋರಿದ್ದರು. ಮಂಗಳವಾರ ಆದೇಶ ನೀಡಿರುವ ಹೈಕೋರ್ಟ್‌, ಎಫ್‌ಐಆರ್‌ ಅನ್ನು ರದ್ದು ಮಾಡಲು ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.