ADVERTISEMENT

ವಿಚಾರವಾದಿಗಳ ಹತ್ಯೆಯಲ್ಲಿ ‘ಗುರೂಜಿ’ಗಳ ನಂಟು!

ಮಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಿಂದಲೇ ತರಬೇತಿ * ಅಹಮದಾಬಾದ್, ಮಂಗಳೂರಿನಲ್ಲಿ ನಡೆದಿದ್ದ ಶಿಬಿರಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2019, 20:38 IST
Last Updated 9 ಮೇ 2019, 20:38 IST
   

ಬೆಂಗಳೂರು: ಗೌರಿ ಲಂಕೇಶ್ ಸೇರಿದಂತೆ ನಾಲ್ವರು ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ, ಮಲೆಗಾಂವ್ ಹಾಗೂ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ‘ಅಭಿನವ್ ಭಾರತ್’ ಸಂಘಟನೆ ಸದಸ್ಯರೇ ಬಾಂಬ್ ತಯಾರಿಸುವ ವಿದ್ಯೆ ಹೇಳಿಕೊಟ್ಟಿದ್ದರು ಎಂಬ ಶಂಕೆ ಎಸ್‌ಐಟಿ ಪೊಲೀಸರಿಗೆ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳವೂ (ಎನ್‌ಐಎ) ತನಿಖೆ ನಡೆಸುತ್ತಿದ್ದು, ಸ್ಫೋಟಗಳ ನಂತರ ತಲೆಮರೆಸಿಕೊಂಡಿರುವ ರಾಮಚಂದ್ರ ಕಲ್ಸಾಂಗ್ರ, ಸಂದೀಪ್ ಡಾಂಗೆ, ಅಶ್ವಿನ್ ಚೌಹಾಣ್ ಬಂಧನಕ್ಕೆ ಬಲೆ ಬೀಸಿದೆ. ಅವರ ಮೇಲೆ ಇಂಟರ್‌ಪೋಲ್ ರೆಡ್‌ ಕಾರ್ನರ್ ನೋಟಿಸ್ ಸಹ ಹೊರಡಿಸಿದೆ.

2006ರಿಂದ 2008ರಲ್ಲಿ ನಡೆದ ಮಲೆಗಾಂವ್, ಮೆಕ್ಕಾ ಮಸೀದಿ, ಅಜ್ಮೇರ್ ದರ್ಗಾ, ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣಗಳಲ್ಲಿ 117 ಮಂದಿ ಮೃತಪಟ್ಟಿದ್ದರು. ಎಲ್ಲ ಪ್ರಕರಣಗಳಲ್ಲೂ ಕಲ್ಸಾಂಗ್ರ, ಡಾಂಗೆ, ಅಶ್ವಿನ್ ಹೆಸರುಗಳು ಕೇಳಿಬಂದಿದ್ದವು. ಎನ್‌ಐಎ ಹಾಗೂ ಸಿಬಿಐ ಮಾತ್ರವಲ್ಲದೇ ಮೂರು ರಾಜ್ಯಗಳ ಪೊಲೀಸರು ದಶಕದಿಂದಲೂ ಶೋಧ ಕಾರ್ಯದಲ್ಲಿ ತೊಡಗಿದ್ದವು. ಯಾವುದೇ ಸುಳಿವು ಸಿಗದೆ ಒದ್ದಾಡುತ್ತಿದ್ದ ತನಿಖಾ ಸಂಸ್ಥೆಗಳಿಗೆ, ಗೌರಿ ಹತ್ಯೆ ಪ್ರಕರಣದ ಆರೋಪಿಗಳ ಮೂಲಕ ಮಹತ್ವದ ಸುಳಿವು ಸಿಕ್ಕಂತಾಗಿದೆ.

ADVERTISEMENT

ಬಂಧಿತರು ಹೇಳಿದ್ದೇನು?

‘2014–2015ರಲ್ಲಿ ಅಹಮದಾಬಾದ್ ಹಾಗೂ ಮಂಗಳೂರಿನಲ್ಲಿ ನಡೆದ ಶಿಬಿರಗಳಲ್ಲಿ ಬಾಬಾಜಿ, ಛೋಟೆ ಮಹತ್ಮಾಜಿ, ಬಡೆ ಮಹಾತ್ಮಾಜಿ, ಗುರೂಜಿ ಹೆಸರಿನ ವ್ಯಕ್ತಿಗಳೂ (ಅವೆಲ್ಲ ಅವರ ಅಸಲಿ ಹೆಸರುಗಳಲ್ಲ) ಪಾಲ್ಗೊಂಡಿದ್ದರು. ಸ್ಫೋಟಕಗಳನ್ನು ಬಳಸಿ ಬಾಂಬ್ ತಯಾರಿಸುವುದನ್ನು ಅವರು ಹೇಳಿಕೊಟ್ಟಿದ್ದರು’ ಎಂದು ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಶರದ್ ಕಳಾಸ್ಕರ್, ಶ್ರೀಕಾಂತ್ ಪಂಗಾರ್ಕರ್, ವಾಸುದೇವ ಸೂರ್ಯವಂಶಿ ಹೇಳಿಕೆ ನೀಡಿದ್ದರು. ಈ ಅಂಶ ದೋಷಾರೋಪಪಟ್ಟಿಯಲ್ಲೂ ಇದೆ.

ಬಂಧಿತರ ಹೇಳಿಕೆ ಆಧರಿಸಿ ಶಂಕಿತರ ರೇಖಾಚಿತ್ರ ತಯಾರಿಸಿದಾಗ, ನಾಲ್ಕು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಚಹರೆಗೆ ಹೋಲಿಕೆ ಕಂಡುಬಂದಿದೆ. 2018ರ ನವೆಂಬರ್‌ನಲ್ಲಿ ಗುಜರಾತ್‌ನ ಭರೂಚ್‌ನಲ್ಲಿ ಎನ್‌ಐಎ ಬಲೆಗೆ ಬಿದ್ದಿದ್ದ ‘ಅಭಿನವ್ ಭಾರತ್‌’ನ ಸುರೇಶ್ ನಾಯರ್‌ನೇ ‘ಬಾಬಾಜಿ’ ಹೆಸರಿನಿಂದ ಗುರುತಿಸಿಕೊಂಡಿದ್ದವನು ಎನ್ನಲಾಗಿದೆ.

‘ಗುರೂಜಿ’ಗಳು ಕಲಿಸಿದ 4 ವಿದ್ಯೆಗಳು

‘2015ರ ಜನವರಿಯಲ್ಲಿ ನಡೆದ ಸಭೆಯಲ್ಲಿ 10ಕ್ಕೂ ಹೆಚ್ಚು ರಾಜ್ಯಗಳ ಸುಮಾರು 25 ಮಂದಿ ಪಾಲ್ಗೊಂಡಿದ್ದರು. ಕಾವಿ ತೊಟ್ಟಿದ್ದ ಹಾಗೂ ನಾಗಸಾಧುಗಳ ರೀತಿಯಲ್ಲಿ ತಲೆಗೂದಲನ್ನು ಸುತ್ತಿದ್ದ ನಾಲ್ವರು ಗುರೂಜಿಗಳು ಸಭೆಯ ನೇತೃತ್ವ ವಹಿಸಿದ್ದರು. ಅವರು ದಿನಕ್ಕೆ ಒಂದರಂತೆ 4 ವಿದ್ಯೆಗಳನ್ನು ಹೇಳಿಕೊಟ್ಟಿದ್ದರು’ ಎಂದು ಹೇಳಿರುವ ಕಳಾಸ್ಕರ್, ಆ ವಿದ್ಯೆಗಳನ್ನು ಈ ಕೆಳಗಿನಂತೆ ವಿವರಿಸಿದ್ದಾನೆ.

*ಮೊದಲ ದಿನ ಹೋಮ–ಹವನಗಳ ಜತೆಗೆ, ಎಂ–ಸಿಲ್ ಹಾಗೂ ಸ್ಫೋಟಕ ಬಳಸಿ ಬಾಂಬ್ ತಯಾರಿಸುವುದನ್ನು ಹೇಳಿಕೊಟ್ಟರು.

*2ನೇ ದಿನ ಸರ್ಕೀಟ್ ಬಾಂಬ್ ಮಾಡುವುದನ್ನು ಕಲಿಸಿದರು. ಜತೆಗೆ, ಅದನ್ನು ಸ್ಫೋಟಿಸುವುದನ್ನೂ ಹೇಳಿಕೊಟ್ಟಿದ್ದಾರೆ.

*3ನೇ ದಿನ ನಮ್ಮ ಕಾಲಿನ ಪಾದಕ್ಕೆ ಕೋಲಿನಿಂದ ಹೊಡೆದು, ವಿದ್ಯುತ್ ಶಾಕ್ ನೀಡಿದರು. ಆ ಮೂಲಕ ಪೊಲೀಸರ ವಿಚಾರಣೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿಕೊಟ್ಟರು.

*4ನೇ ದಿನ ಮೌಲಾನಾ ರೀತಿ ಬಟ್ಟೆ ಧರಿಸಿದ್ದ ಗುರೂಜಿಯೊಬ್ಬರು, ಅಸಲಿ ಪಿಸ್ತೂಲ್ ತರಿಸಿ ಗುಂಡು ಹಾರಿಸುವ ತರಬೇತಿ ನೀಡಿದರು.

ಸ್ವಾಮಿ ಅಸೀಮಾನಂದ ಹೆಸರು ಪ್ರಸ್ತಾಪ

‘ಆ ನಾಲ್ವರು ಗುರೂಜಿಗಳ ಜತೆ ಹೋಗಿ ಹೆಚ್ಚಿನ ವಿದ್ಯೆ ಕಲಿತು ಬರುವುದಾಗಿ ಹೇಳಿದಾಗ, ‘ಅವರೆಲ್ಲ ಸ್ವಾಮಿ ಅಸೀಮಾನಂದ ಅವರ ಹುಡುಗರು. ಸ್ವಾಮಿ ಕರೆದಾಗಷ್ಟೇ ಹೋಗಬೇಕು’ ಎಂದು ವೀರೇಂದ್ರ ತಾವಡೆ ಹೇಳಿದ್ದರು’ ಎಂದೂ ಕಳಾಸ್ಕರ್ ಹೇಳಿಕೆ ಕೊಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.