ADVERTISEMENT

ನಿರ್ಭಯಾ ಪ್ರಕರಣ: ಫೆ.1ಕ್ಕೆ ಗಲ್ಲು ಶಿಕ್ಷೆ

ದಯಾ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ: ಹೊಸದಾಗಿ ಡೆತ್‌ ವಾರಂಟ್‌ ಹೊರಡಿಸಿದ ದೆಹಲಿ ಕೋರ್ಟ್‌

ಪಿಟಿಐ
Published 17 ಜನವರಿ 2020, 19:35 IST
Last Updated 17 ಜನವರಿ 2020, 19:35 IST
   

ನವದೆಹಲಿ : ದೇಶವನ್ನೇ ತಲ್ಲಣಗೊಳಿಸಿದ್ದ, ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಫೆ.1ರಂದು ಬೆಳಿಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್‌ ಹೊಸದಾಗಿ ಶುಕ್ರವಾರ ಡೆತ್‌ ವಾರಂಟ್‌ ಹೊರಡಿಸಿದೆ.

ಅಪರಾಧಿಗಳ ಪೈಕಿ ಮುಕೇಶ್‌ಸಿಂಗ್‌ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಿರಸ್ಕರಿಸಿದ ಬಳಿಕ, ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸತೀಶ್‌ಕುಮಾರ್ ಅರೋರಾ ವಾರಂಟ್‌ ಹೊರಡಿಸಿದರು.

ಈ ಹಿಂದೆ ನಾಲ್ವರು ಅಪರಾಧಿಗಳಿಗೆ ಜ.22 ರಂದು ಗಲ್ಲು ಶಿಕ್ಷೆ ವಿಧಿಸಲು ದೆಹಲಿ ಕೋರ್ಟ್‌ ವಾರಂಟ್‌ ಹೊರಡಿ ಸಿತ್ತು. ಜ. 14ರಂದು, ಮುಕೇಶ್‌ ಸಿಂಗ್‌ ದಯಾ ಅರ್ಜಿ ಸಲ್ಲಿಸಿದ್ದ. ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್ ಅನಿಲ್‌ ಬೈಜಲ್‌ ದಯಾ ಅರ್ಜಿಯನ್ನು ತಿರಸ್ಕರಿಸುವಂತೆ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಕೇಂದ್ರ ಗೃಹ ಸಚಿವಾಲಯ ಸಹ, ದಯಾ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿ ಅವರಿಗೆ ಶುಕ್ರವಾರ ಶಿಫಾರಸು ಮಾಡಿತ್ತು.

ADVERTISEMENT

ಆದರೆ, ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಅಪರಾಧಿಗಳ ಪೈಕಿ ಇಬ್ಬರಿಗೆ ಇನ್ನೂ ಅವಕಾಶ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಫೆ. 1ರ ಒಳಗಾಗಿ ಈ ಇಬ್ಬರು ಅರ್ಜಿ ಸಲ್ಲಿಸಿದಲ್ಲಿ ಗಲ್ಲು ಶಿಕ್ಷೆ ವಿಧಿಸುವುದು
ಮತ್ತೂ ವಿಳಂಬವಾಗಲಿದೆ. ಅಪರಾಧಿ ಪವನ್‌ ಕುಮಾರ್‌ ಗುಪ್ತಾ, ಡಿ.19ರಂದು ದೆಹಲಿ ಹೈಕೋರ್ಟ್‌ ನೀಡಿದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ‘ಕೃತ್ಯ ನಡೆದಾಗ ನಾನು ಬಾಲಕನಾಗಿದ್ದೆ ಎಂಬ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿದೆ’ ಎಂದಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.