ADVERTISEMENT

ಬಿಹಾರಕ್ಕೆ ಉಚಿತ ಕೋವಿಡ್ ಲಸಿಕೆ: ಬಿಜೆಪಿ ಭರವಸೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 21:00 IST
Last Updated 22 ಅಕ್ಟೋಬರ್ 2020, 21:00 IST
ಬಿಹಾರದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌
ಬಿಹಾರದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌   

ನವದೆಹಲಿ: ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ಪೂರೈಸಲಾಗುವುದು ಎಂದು ಬಿಜೆಪಿ ನೀಡಿರುವ ಭರವಸೆಯ ಬಗ್ಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಬಿಜೆಪಿಯ ಈ ಘೋಷಣೆ ಆಘಾತಕರ ಮತ್ತು ಅವಕಾಶವಾದಿತನ ಎಂದು ವಿರೋಧ ಪಕ್ಷಗಳು ಹೇಳಿವೆ. ಸಾಂಕ್ರಾಮಿಕವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿರುವ ಬಿಜೆಪಿಯ ವಿರುದ್ಧಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿವೆ.

ಬಿಜೆಪಿಗೆ ಮತ ಹಾಕದಿದ್ದರೆ ಲಸಿಕೆ ದೊರೆಯುವುದಿಲ್ಲ ಎಂದು ಬಿಹಾರದ ಜನರನ್ನು ಬೆದರಿಸಲು ಸಾಧ್ಯವಿಲ್ಲ. ಯಾವುದೇ ಶಕ್ತಿ ಕೂಡ ಅವರ ಹಕ್ಕನ್ನು ಕಸಿದುಕೊಳ್ಳಲಾಗದು. ಜನರು ಕೇಂದ್ರದ ದಬ್ಬಾಳಿಕೆಯನ್ನು ಮತಗಳ ಮೂಲಕ ತಿರಸ್ಕರಿಸಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ ಗೌರವ್‌ ಗೊಗೊಯಿ ಹೇಳಿದ್ದಾರೆ.

ADVERTISEMENT

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಿಜೆಪಿಯ ಪ್ರಣಾಳಿಕೆಯನ್ನು ಪಟ್ನಾದಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಕೋವಿಡ್‌ ಲಸಿಕೆಯು ಬಳಕೆಗೆ ಲಭ್ಯವಾದ ಬಳಿಕ ಬಿಹಾರದ ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಲಾಗುವುದು ಎಂಬುದೇ ಬಿಜೆಪಿಯ ಮೊದಲ ಭರವಸೆ ಎಂದು ಅವರು ಹೇಳಿದರು.

‘ನೀವು ನಮಗೆ ಮತ ಕೊಡಿ, ನಾವು ನಿಮಗೆ ಲಸಿಕೆ ಕೊಡುತ್ತೇವೆ... ಎಂತಹ ಆಘಾತಕಾರಿ ಸಿನಿಕತನ. ಆಕೆ (ನಿರ್ಮಲಾ) ಮತ್ತು ಅವರ ನಿರ್ಲಜ್ಜ ಸರ್ಕಾರಕ್ಕೆ ಚುನಾವಣಾ ಆಯೋಗವು ಪಾಠ ಕಲಿಸುತ್ತದೆಯೇ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪ್ರಶ್ನಿಸಿದ್ದಾರೆ.

‘ಕೊರೊನಾ ಲಸಿಕೆಯು ದೇಶಕ್ಕೆ ಸೇರಿದ್ದೇ ಹೊರತು ಬಿಜೆಪಿಯದ್ದಲ್ಲ. ಲಸಿಕೆಯನ್ನು ರಾಜಕೀಯ ಲಾಭದ ಸಾಧನವಾಗಿ ಬಿಜೆಪಿ ಬಳಸಿದ್ದು ನೋಡಿದರೆ, ರೋಗ ಮತ್ತು ಸಾವಿನ ಬಗ್ಗೆ ಜನರಲ್ಲಿರುವ ಭೀತಿಯನ್ನು ಬಳಸಿಕೊಳ್ಳುವುದು ಬಿಟ್ಟು ಬಿಜೆಪಿಗೆ ಬೇರೆ ಆಯ್ಕೆಯೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬಿಹಾರದ ಜನರು ಸ್ವಾಭಿಮಾನಿಗಳು. ಸ್ವಲ್ಪ ಹಣಕ್ಕೆ ತಮ್ಮ ಮಕ್ಕಳ ಭವಿಷ್ಯವನ್ನು ಅವರು ಮಾರುವುದಿಲ್ಲ’ ಎಂದು ಬಿಹಾರದ ಪ್ರಮುಖ ವಿರೋಧ ಪಕ್ಷ ಆರ್‌ಜೆಡಿ ಹೇಳಿದೆ.

‘ಬಿಹಾರದ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಅಂತಹ ಘೋಷಣೆ ಏಕೆ ಮಾಡಿಲ್ಲ. ಬಿಜೆಪಿಯ ಸಂಕುಚಿತ ಮತ್ತು ಅವಕಾಶವಾದಿ ರಾಜಕಾರಣಕ್ಕೆ ಮುಂದಿನ ಚುನಾವಣೆಗಳಲ್ಲಿಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಜನರು ಉತ್ತರ ನೀಡಲಿದ್ದಾರೆ’ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ತಮಿಳುನಾಡಿನಲ್ಲೂ ಉಚಿತ: ತಮಿಳುನಾಡಿನ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಗುರುವಾರ ಘೋಷಿಸಿದ್ದಾರೆ. ಲಸಿಕೆ ಲಭ್ಯವಾದ ತಕ್ಷಣ ರಾಜ್ಯದ ಎಲ್ಲ ವರ್ಗದ ಜನರಿಗೂ ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಔಷಧದ ವೆಚ್ಚವನ್ನು ತಮಿಳುನಾಡು ಸರ್ಕಾರ ಭರಿಸಲಿದೆ ಎಂದಿದ್ದಾರೆ.

***

ಬಿಹಾರದ ಜನರು ಬಿಜೆಪಿಗೆ ಮತ ಹಾಕದಿದ್ದರೆ ಅಲ್ಲಿನ ಜನರಿಗೆ ಮೋದಿಯವರು ಲಸಿಕೆ ನಿರಾಕರಿಸುತ್ತಾರೆಯೇ? ಇದು ಪ್ರಜಾಪ್ರಭುತ್ವವಲ್ಲ, ನಿರಂಕುಶಾಧಿಕಾರ

-ಗೌರವ್‌ ಗೊಗೊಯಿ, ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ

***

ಸರ್ಕಾರವು ಕೋವಿಡ್‌ ಲಸಿಕೆ ಲಭ್ಯತೆ ಕಾರ್ಯತಂತ್ರ ಪ್ರಕಟಿಸಿದೆ. ನಿಮಗೆ ಯಾವಾಗ ದೊರೆಯಲಿದೆ ಎಂಬುದನ್ನು ತಿಳಿಯಲು ರಾಜ್ಯಗಳ ಚುನಾವಣಾ ವೇಳಾಪಟ್ಟಿ ನೋಡಿ

-ರಾಹುಲ್‌ ಗಾಂಧಿ, ಕಾಂಗ್ರೆಸ್ ಸಂಸದ

***

ಲಸಿಕೆ ಇನ್ನೂ ಬಂದಿಲ್ಲ. ಆದರೆ, ಬಿಜೆಪಿ ಅದನ್ನು ಆಗಲೇ ಚುನಾವಣಾ ರಾಜಕಾರಣಕ್ಕೆ ಬಳಸಿಕೊಂಡಿದೆ. ಕೇಂದ್ರಕ್ಕೆ ಎಲ್ಲ ರಾಜ್ಯಗಳ ಜನರ ಬಗ್ಗೆ ಸಮಾನ ಹೊಣೆಗಾರಿಕೆ ಇಲ್ಲವೇ?‌

-ಪ್ರಿಯಾಂಕಾ ಚತುರ್ವೇದಿ, ಶಿವಸೇನಾ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.