ADVERTISEMENT

ಎರಡು ಡೋಸ್‌ ಲಸಿಕೆ ಪಡೆದರೂ ಕೋವಿಡ್‌ನಿಂದ ವ್ಯಕ್ತಿ ಸಾವು

ಪಿಟಿಐ
Published 16 ನವೆಂಬರ್ 2021, 13:59 IST
Last Updated 16 ನವೆಂಬರ್ 2021, 13:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಇಂದೋರ್‌ (ಮಧ್ಯಪ್ರದೇಶ): ಕೋವಿಡ್‌ ಲಸಿಕೆಯ ಎರಡು ಡೋಸ್‌ ಪಡೆದಾಗ್ಯು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ 69 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ನ. 9 ರಂದು ‘ಮನೋರಮಾ ರಾಜೇ ಟಿ.ಬಿ ಆಸ್ಪತ್ರೆ’ಗೆ ದಾಖಲಾಗಿದ್ದರು. ಅವರ ಪರಿಸ್ಥಿತಿ ಗಂಭೀರವಾಗಿತ್ತು. ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ಸಾವಿಗೀಡಾಗಿದ್ದಾರೆ,’ ಎಂದು ಇಂದೋರ್ ಜಿಲ್ಲೆಯ ಕೋವಿಡ್-19 ನೋಡಲ್ ಅಧಿಕಾರಿ ಡಾ.ಅಮಿತ್ ಮಾಲಕರ್ ತಿಳಿಸಿದ್ದಾರೆ.

ಇಂದೋರ್ ಜಿಲ್ಲೆಯಲ್ಲಿ ನಾಲ್ಕೂವರೆ ತಿಂಗಳಲ್ಲೇ ವರದಿಯಾದ ಮೊದಲ ಕೋವಿಡ್‌ ಸಂಬಂಧಿತ ಸಾವು ಇದಾಗಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಅವರು ದೀರ್ಘಕಾಲದಿಂದಲೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಎರಡು ಡೋಸ್‌ ಕೋವಿಡ್‌ ಲಸಿಕೆಯನ್ನೂ ಪಡೆದಿದ್ದರೂ, ಅವರು ಕೋವಿಡ್‌ನಿಂದ ಹೆಚ್ಚು ಬಾಧೆಗೊಳಗಾಗಿದ್ದರು,’ ಎಂದು ಮಾಲಕರ್‌ ಹೇಳಿದರು.

ಮಧ್ಯಪ್ರದೇಶದಲ್ಲಿ ಇಂದೋರ್ ಕೋವಿಡ್‌ನಿಂದ ಹೆಚ್ಚು ಬಾಧಿತಗೊಂಡ ಜಿಲ್ಲೆಯಾಗಿದೆ. ಆದರೆ, ಕಳೆದ ಕೆಲ ತಿಂಗಳಲ್ಲಿ ಇಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಇಂದೋರ್‌ನಲ್ಲಿ ಕೇವಲ ಒಬ್ಬ ಕೊರೊನಾ ವೈರಸ್‌ ಸೋಂಕಿತರಷ್ಟೇ ಪತ್ತೆಯಾಗಿದ್ದಾರೆ. ಇಲ್ಲಿ ಈ ವರೆಗೆ 1,53,278 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,392 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.