ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ
ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕು ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ‘ದೋಷಪೂರಿತ’ ಹಾಗೂ ‘ಪೂರ್ವನಿರ್ಧರಿತ ಕಸರತ್ತು’ ಎಂದು ಕರೆಯುವ ಮೂಲಕ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿದ್ದ ಅರುಣ್ ಕುಮಾರ್ ಮಿಶ್ರಾ ಅಧಿಕಾರಾವಧಿ ಜೂನ್ 1ಕ್ಕೆ ಕೊನೆಗೊಂಡಿತ್ತು. ಆರು ತಿಂಗಳಿಂದ ಆಯೋಗಕ್ಕೆ ಅಧ್ಯಕ್ಷರಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಡಿಸೆಂಬರ್ 18ರಂದು ಸಭೆ ಸೇರಿ ಚರ್ಚಿಸಿತ್ತು. ಈ ಸಭೆಯಲ್ಲಿ ರಾಹುಲ್ ಹಾಗೂ ಖರ್ಗೆ ಭಾಗಿಯಾಗಿದ್ದರು. ಸಭೆಯ ತೀರ್ಮಾನದ ಬಗ್ಗೆ ಉಭಯ ನಾಯಕರು ಜಂಟಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ಫಾಲಿ ನಾರಿಮನ್ ಹಾಗೂ ಕೆ.ಎಂ. ಜೋಸೆಫ್ ಅವರ ಹೆಸರನ್ನು ವಿಪಕ್ಷ ನಾಯಕರು ಸೂಚಿಸಿದ್ದರು. ಸದಸ್ಯರ ಸ್ಥಾನಗಳಿಗೆ ನ್ಯಾಯಮೂರ್ತಿಗಳಾದ ಎಸ್.ಮುರಳೀಧರ್ ಹಾಗೂ ಅಖಿಲ್ ಖುರೇಷಿ ಹೆಸರನ್ನು ಶಿಫಾರಸು ಮಾಡಿದ್ದರು. ‘ಈ ಮೂಲಕ ಪ್ರಾದೇಶಿಕ, ಜಾತಿ, ಸಮುದಾಯ ಹಾಗೂ ಧಾರ್ಮಿಕ ವೈವಿಧ್ಯವನ್ನು ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯ ತಿಳಿಸಿದ್ದೆವು. ಆದರೆ, ಕೇಂದ್ರ ಸರ್ಕಾರವು ಈ ಅಭಿಪ್ರಾಯ ಕಡೆಗಣಿಸಿ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದೆ. ಇದು ಖಂಡನೀಯ’ ಎಂದು ಅವರು ತಿಳಿಸಿದ್ದಾರೆ.
ಆಯೋಗದ ನೂತನ ಅಧ್ಯಕ್ಷರನ್ನಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಿಸಿತ್ತು. ಜತೆಗೆ, ಇಬ್ಬರು ಸದಸ್ಯರ ನೇಮಿಸಲಾಗಿತ್ತು.
ತಮ್ಮ ಎರಡು ಪುಟಗಳ ಭಿನ್ನಾಭಿಪ್ರಾಯದ ಟಿಪ್ಪಣಿಯಲ್ಲಿ ಖರ್ಗೆ ಮತ್ತು ರಾಹುಲ್ ಅವರು, ‘ಸಭೆಯು ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ಸಂಪ್ರದಾಯವನ್ನು ನಿರ್ಲಕ್ಷಿಸಿದೆ. ಪೂರ್ವನಿರ್ಧರಿತ ಕಸರತ್ತು ನಡೆಸಿದೆ. ಈ ಬೆಳವಣಿಗೆಯು ನ್ಯಾಯಸಮ್ಮತತೆ ಮತ್ತು ನಿಷ್ಪಕ್ಷಪಾತದ ತತ್ವಗಳನ್ನು ದುರ್ಬಲಗೊಳಿಸಿದೆ. ಇದರಿಂದಾಗಿ, ಆಯ್ಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ’ ಎಂದು ತಿಳಿಸಿದ್ದಾರೆ.
‘ಚರ್ಚೆಯನ್ನು ಉತ್ತೇಜಿಸುವ ಮತ್ತು ಸಾಮೂಹಿಕ ನಿರ್ಧಾರವನ್ನು ಖಾತರಿಪಡಿಸುವ ಬದಲು, ಸಮಿತಿಯು ತನ್ನ ಸಂಖ್ಯಾತ್ಮಕ ಬಹುಮತವನ್ನು ಅವಲಂಬಿಸಿ ಹೆಸರುಗಳನ್ನು ಅಂತಿಮಗೊಳಿಸಿತು. ಸಭೆಯಲ್ಲಿ ಎತ್ತಿದ ಕಾನೂನುಬದ್ಧ ಕಾಳಜಿ ಮತ್ತು ದೃಷ್ಟಿಕೋನಗಳನ್ನು ಕಡೆಗಣಿಸಿತು’ ಎಂದು ಖರ್ಗೆ ಮತ್ತು ರಾಹುಲ್ ಹೇಳಿದ್ದಾರೆ.
ರೋಹಿಂಗ್ಟನ್ ಫಾಲಿ ನಾರಿಮನ್ ಅವರು ಅಲ್ಪಸಂಖ್ಯಾತ ಪಾರ್ಸಿ ಸಮುದಾಯದ ಒಬ್ಬ ವಿಶಿಷ್ಟ ನ್ಯಾಯಶಾಸ್ತ್ರಜ್ಞ. ಸಾಂವಿಧಾನಿಕ ಮೌಲ್ಯಗಳಿಗೆ ಅಚಲವಾದ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ, ಕ್ರೈಸ್ತ ಸಮುದಾಯಕ್ಕೆ ಸೇರಿದ ಕೆ.ಎಂ. ಜೋಸೆಫ್ ಅವರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಿರ್ಲಕ್ಷಿಸಲ್ಪಟ್ಟ ಗುಂಪುಗಳ ಹಿತ ಕಾಯುವ ಅನೇಕ ತೀರ್ಪುಗಳನ್ನು ನೀಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅವರು ಸೂಕ್ತ ಅಭ್ಯರ್ಥಿಯಾಗಿದ್ದರು’ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ, ವಿಪಕ್ಷ ನಾಯಕರು, ಗೃಹ ಸಚಿವರು, ಲೋಕಸಭಾಧ್ಯಕ್ಷ ಹಾಗೂ ರಾಜ್ಯಸಭೆಯ ಉಪ ಸಭಾಪತಿ ಅವರು ಉನ್ನತ ಮಟ್ಟದ ಸಮಿತಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.