ADVERTISEMENT

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಭಿನ್ನಮತೀಯ ಜಿ–23 ಬಣ ಚಿಂತನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 1:49 IST
Last Updated 30 ಆಗಸ್ಟ್ 2022, 1:49 IST
ಪೃಥ್ವಿರಾಜ್‌ ಚವಾಣ್‌ ಮತ್ತು ಶಶಿ ತರೂರ್‌
ಪೃಥ್ವಿರಾಜ್‌ ಚವಾಣ್‌ ಮತ್ತು ಶಶಿ ತರೂರ್‌   

ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲು ಭಿನ್ನಮತೀಯ ಬಣದ ‘ಜಿ-23’ ನಾಯಕರು ಚಿಂತನೆ ನಡೆಸಿದ್ದಾರೆ. ಅಕ್ಟೋಬರ್ 17 ರಂದು ನಡೆಯಲಿರುವ ಚುನಾವಣೆಗೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅಥವಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಗುಲಾಂ ನಬಿ ಆಜಾದ್ ಮತ್ತು ಇತರ ಪ್ರಮುಖ ನಾಯಕರ ನಿರ್ಗಮನದಿಂದ ಹಿನ್ನಡೆ ಅನುಭವಿಸಿರುವ ಜಿ–23ಯಲ್ಲಿ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂಬುದೂ ಗೊತ್ತಾಗಿದೆ.

ಪಕ್ಷದಲ್ಲಿ ವ್ಯಾಪಕ ಸುಧಾರಣೆ ಬಯಸಿದ್ದ ಜಿ -23 ನಾಯಕರು ಸೋನಿಯಾ ಗಾಂಧಿ ಅವರಿಗೆ 2020ರ ಆಗಸ್ಟ್‌ನಲ್ಲಿ ಪತ್ರ ಬರೆದಿದ್ದರು.

ADVERTISEMENT

ಮಲಯಾಳಿ ದಿನ ಪತ್ರಿಕೆ ‘ಮಾತೃಭೂಮಿ’ಗೆ ಸೋಮವಾರದ ಬರೆದ ಲೇಖನವೊಂದರಲ್ಲಿ ತರೂರ್ ಅವರು ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸುವ ಕುರಿತು ಪ್ರತಿಪಾದಿಸಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಗಾಂಧಿ ಕುಟುಂಬ ಕಣಕ್ಕಿಳಿಸಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಒಂದು ಬಣ ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಬೇಕು ಎಂದು ಬಯಸುತ್ತಿದೆ. ಸ್ವತಃ ಅಶೋಕ್‌ ಗೆಹಲೋತ್‌ ಅವರೂ ರಾಹುಲ್‌ ಹೆಸರನ್ನು ಸೂಚಿಸಿದ್ದಾರೆ. ಒಂದು ವೇಳೆ ಗಾಂಧಿ ಕುಟುಂಬದವರು ಚುನಾವಣೆಗೆ ಸ್ಪರ್ಧೆ ಮಾಡದೇ ಹೋದರೆ, ಜಿ–23 ಬಣದಿಂದ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಹಾಗೆ ಸ್ಪರ್ಧೆ ಮಾಡಿದ್ದೇ ಆದರೆ, ಅದು ಸೋನಿಯಾ ಗಾಂಧಿ ಅವರ ಆಯ್ಕೆಗೆ ಸವಾಲೊಡ್ಡಿದಂತೆ ಆಗಲಿದೆ.

2000ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೊನೆಯ ಬಾರಿ ಚುನಾವಣೆ ನಡೆದಾಗ ಜಿತೇಂದ್ರ ಪ್ರಸಾದ್‌ ಅವರು ಸೋನಿಯಾ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದ್ದರಾದರೂ, ಸೋತಿದ್ದರು.

ಇದೇ ವೇಳೆ ಕಾಂಗ್ರೆಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಸ್ಪರ್ಧಿಸಲು ಬಯಸುವವರು ಸೆ.30ರೊಳಗೆ ನಾಮಪತ್ರ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.