ಕುನಾಲ್ ಕಾಮ್ರಾ
@kunalkamra88
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ವಿರುದ್ಧ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಕುರಿತು ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹಾಸ್ಯನಟ ಕುನಾಲ್ ಕಾಮ್ರಾ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಏಪ್ರಿಲ್ 5ರಂದು ಕಾಮ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ತಮ್ಮ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿರುವ ದೂರುಗಳು, ಮೂಲಭೂತ ಹಕ್ಕುಗಳಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಕಾಮ್ರಾ ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ಅರ್ಜಿಯ ವಿಚಾರಣೆಯು ಏಪ್ರಿಲ್ 8ರಂದು ನಡೆಯುವ ಸಾಧ್ಯತೆ ಇದೆ.
ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಕಾಮ್ರಾ ಇದುವರೆಗೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿಲ್ಲ ಎಂದು ಅಧಿಕಾರಿಗಳು ತಿಳಿದ್ದಾರೆ.
36 ವರ್ಷದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಈಚೆಗೆ ಕಾರ್ಯಕ್ರಮವೊಂದರಲ್ಲಿ ಏಕನಾಥ ಶಿಂದೆ ಅವರನ್ನು ‘ವಂಚಕ’ ಎಂದು ಕರೆಯುವ ಮೂಲಕ ರಾಜಕೀಯ ವೃತ್ತಿಜೀವನವನ್ನು ಟೀಕಿಸಿದ್ದರು. ಇದು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.
ಕಾಮ್ರಾ ಅವರ ಕಾರ್ಯಕ್ರಮ ನಡೆದಿದ್ದ ಸ್ಥಳದಲ್ಲಿ ದಾಂದಲೆ ನಡೆಸಿದ ಆರೋಪದ ಅಡಿ ಪೊಲೀಸರು ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಸೇರಿ ಇತರರನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.