ADVERTISEMENT

‘ಎಕ್ಸ್‌’ ಖಾತೆಯಲ್ಲಿ ವಿಡಿಯೊ ಹಂಚಿಕೊಂಡ ಖರ್ಗೆ, ಜೈರಾಮ್‌ಗೆ ಗಡ್ಕರಿ ನೋಟಿಸ್‌

ಪಿಟಿಐ
Published 2 ಮಾರ್ಚ್ 2024, 4:20 IST
Last Updated 2 ಮಾರ್ಚ್ 2024, 4:20 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ    

ನಾಗ್ಪುರ: ತಮ್ಮ ಬಗ್ಗೆ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಆರೋಪದ ಮೇಲೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರಿಗೆ ನೋಟಿಸ್‌ ಕಳುಹಿಸಿದ್ದಾರೆ.

ಮೈಕ್ರೊ ಬ್ಲಾಗಿಂಗ್ ಜಾಲತಾಣ ಎಕ್ಸ್‌ನಲ್ಲಿ ಕಾಂಗ್ರೆಸ್‌ನ ಅಧಿಕೃತ ಖಾತೆಯಿಂದ ವಿಡಿಯೊ ಪೋಸ್ಟ್‌ ಆಗಿರುವ ಬಗ್ಗೆ ತಿಳಿದು ತಮ್ಮ ಕಕ್ಷಿದಾರರಿಗೆ ಆಘಾತವಾಗಿದೆ ಎಂದು ಗಡ್ಕರಿ ಅವರ ವಕೀಲ ಬಲೇಂದರ ಶೇಖರ್‌ ಹೇಳಿದ್ದಾರೆ.

ಗಡ್ಕರಿಯವರು ‘ದಿ ಲಲ್ಲಾಂಟಾಪ್‌’ ವೆಬ್‌ ಪೋರ್ಟಲ್‌ಗೆ ನೀಡಿರುವ ಸಂದರ್ಶನದ 19 ಸೆಕೆಂಡುಗಳ ವಿಡಿಯೊ ತುಣುಕನ್ನು ಖರ್ಗೆ ಮತ್ತು ರಮೇಶ್‌ ಅವರು ಉದ್ದೇಶಪೂರ್ವಕವಾಗಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ, ಗಡ್ಕರಿ ಅವರ ಮಾತುಗಳನ್ನು ತಿರುಚಲಾಗಿದ್ದು, ಸಂದರ್ಭೋಚಿತ ಉದ್ದೇಶ ಮತ್ತು ಅರ್ಥವನ್ನು ಮರೆಮಾಚಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ADVERTISEMENT

ಗಡ್ಕರಿ ಅವರ ಕುರಿತು ಸಾರ್ವಜನಿಕರ ದೃಷ್ಟಿಯಲ್ಲಿ ಗೊಂದಲ, ಉದ್ರೇಕ ಮತ್ತು ಅಪಖ್ಯಾತಿ ಸೃಷ್ಟಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜನರ ವಿಶ್ವಾಸವನ್ನು ಗಳಿಸಲು ಸಜ್ಜಾಗಿರುವ ಬಿಜೆಪಿ ಒಗ್ಗಟ್ಟಿನಲ್ಲಿ ಬಿರುಕು ಸೃಷ್ಟಿಸುವ ವ್ಯರ್ಥ ಪ್ರಯತ್ನ ಇದಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ದೇಶದ ಹಲವೆಡೆ ಕಾರ್ಮಿಕರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಗ್ರಾಮಗಳಲ್ಲಿ ಉತ್ತಮ ರಸ್ತೆಗಳಿಲ್ಲ, ಕುಡಿಯಲು ಶುದ್ಧ ನೀರಿಲ್ಲ, ಉತ್ತಮ ಆಸ್ಪತ್ರೆಗಳು ಮತ್ತು ಶಾಲೆಗಳಿಲ್ಲ ಎಂದು ಗಡ್ಕರಿ ಅವರು ಮಾತನಾಡಿರುವ ವಿಡಿಯೊಗೆ ಹಿಂದಿ ಶೀರ್ಷಿಕೆಯನ್ನು ನೀಡುವ ಮೂಲಕ ಉದ್ದೇಶಪೂರ್ವಕವಾಗಿ ಖರ್ಗೆ, ರಮೇಶ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಖರ್ಗೆ ಮತ್ತು ರಮೇಶ್‌ ಅವರು ಗಡ್ಕರಿಯವರ ಸಂದರ್ಶನದ ಸಂಪೂರ್ಣ ವಿಷಯಗಳ ಬಗ್ಗೆ ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಹಿಂದಿ ಶೀರ್ಷಿಕೆ ಮತ್ತು ವಿಡಿಯೊ ತುಣುಕನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ಗಡ್ಕರಿ ಅವರ ಖ್ಯಾತಿಯನ್ನು ಕೆಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ನೋಟಿಸ್‌ ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಅನ್ನು ಅಳಿಸುವಂತೆ ನಿಮಗೆ ತಿಳಿಸುತ್ತದೆ. ಜತೆಗೆ ಮೂರು ದಿನಗಳೊಳಗೆ ನನ್ನ ಕಕ್ಷಿದಾರರಿಗೆ ಲಿಖಿತ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ನನ್ನ ಕಕ್ಷಿದಾರರು ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.