ADVERTISEMENT

ಗಾಂಧಿಯೇತರ ಕಾಂಗ್ರೆಸ್ ನಾಯಕರಿಗೆ ಗಾಂಧಿ ಕುಟುಂಬ ಗೌರವ ನೀಡಿಲ್ಲ: ಪ್ರಲ್ಹಾದ ಜೋಶಿ

ಪಿಟಿಐ
Published 29 ಡಿಸೆಂಬರ್ 2024, 9:26 IST
Last Updated 29 ಡಿಸೆಂಬರ್ 2024, 9:26 IST
<div class="paragraphs"><p>ಸೋನಿಯಾ ಗಾಂಧಿ, ಪ್ರಲ್ಹಾದ ಜೋಶಿ</p></div>

ಸೋನಿಯಾ ಗಾಂಧಿ, ಪ್ರಲ್ಹಾದ ಜೋಶಿ

   

ಅಗರ್ತಲಾ(ತ್ರಿಪುರ): ಗಾಂಧಿ ಕುಟುಂಬವು ಗಾಂಧಿಯೇತರ ಕಾಂಗ್ರೆಸ್‌ ನಾಯಕರಿಗೆ ಎಂದಿಗೂ ಗೌರವ ನೀಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.

ಸ್ಮಾರಕ ನಿರ್ಮಿಸುವ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡದೇ ನಿಗಮ್‌ಬೋಧ್‌ನಲ್ಲಿ ಮಾಡುವ ಮೂಲಕ ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿರುವ ಜೋಶಿ, ಇದು ಕೀಳುಮಟ್ಟದ ರಾಜಕೀಯ ಎಂದು ಕಿಡಿಕಾರಿದರು.

ADVERTISEMENT

‘ನಮ್ಮ ನಡುವಿನ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಮನಮೋಹನ ಸಿಂಗ್ ಒಬ್ಬ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಂಗ್ ಅವರ ಅಂತ್ಯಕ್ರಿಯೆನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಾಧ್ಯವಿರುವ ಎಲ್ಲ ಉಪಕ್ರಮಗಳನ್ನು ತೆಗೆದುಕೊಂಡಿದ್ದಾರೆ’ ಎಂದು ತಿಳಿಸಿದರು.

ಮುಂದುವರಿದು, ‘ಮನಮೋಹನ ಸಿಂಗ್ ಮಾತ್ರವಲ್ಲ, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೂ ಕಾಂಗ್ರೆಸ್ ಸರಿಯಾದ ಗೌರವ ನೀಡಿಲ್ಲ. ಪ್ರಣಬ್ ಮುಖರ್ಜಿ ಅವರ ಮರಣದ ನಂತರ ಕಾಂಗ್ರೆಸ್‌ ಸಿಡಬ್ಲ್ಯೂಸಿ ಸಭೆ ಕರೆಯದೇ ಅಲಕ್ಷ್ಯ ಮಾಡಿರುವುದನ್ನು ಇದೀಗ ಅವರ ಮಗಳೇ ಟೀಕಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ವಾಸ್ತವವಾಗಿ ಗಾಂಧಿ ಕುಟುಂಬವು ಗಾಂಧಿಯೇತರ ಕಾಂಗ್ರೆಸ್ ನಾಯಕರಿಗೆ ಎಂದಿಗೂ ಗೌರವ ನೀಡಿಲ್ಲ. ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಅವರಿಗೆ ಗೌರವನ್ನೂ ನೀಡಿಲ್ಲ. ಈ ಎಲ್ಲದರ ಬಗ್ಗೆ ಗಾಂಧಿ ಕುಟುಂಬವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.