ADVERTISEMENT

Gandhi Jayanti: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಗೌರವ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2025, 5:05 IST
Last Updated 2 ಅಕ್ಟೋಬರ್ 2025, 5:05 IST
<div class="paragraphs"><p>ದ್ರೌಪದಿ ಮುರ್ಮು, ನರೇಂದ್ರ ಮೋದಿ</p></div>

ದ್ರೌಪದಿ ಮುರ್ಮು, ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ADVERTISEMENT

ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ಬೆಳಿಗ್ಗೆ ರಾಜ್‌ಘಾಟ್‌ನಲ್ಲಿರುವ ಗಾಂಧಿ ಮತ್ತು ವಿಜಯ್ ಘಾಟ್‌ನಲ್ಲಿರುವ ಬಹದ್ದೂರ್ ಸ್ಮಾರಕಕ್ಕೆ ಭೇಟಿ ನೀಡಿ ಅಗಲಿದ ಚೇತನಗಳಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಗಾಂಧಿ ಅವರ ಸತ್ಯ, ಅಹಿಂಸೆ ಮಾರ್ಗವನ್ನು ಅನುಸರಿಸಲು ಹಾಗೂ ದೇಶದ ಕಲ್ಯಾಣ ಹಾಗೂ ಪ್ರಗತಿಗೆ ಬದ್ಧರಾಗಿರುವಂತೆ ಮುರ್ಮು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

'ಗಾಂಧಿ ಅವರ ಆದರ್ಶಗಳು ಇತಿಹಾಸದ ಹಾದಿಯನ್ನು ಪರಿವರ್ತಿಸಿದವು. ಧೈರ್ಯ ಹಾಗೂ ಸರಳತೆ ಹೇಗೆ ಬದಲಾವಣೆಯ ಸಂಕೇತವಾಗಬಹುದು ಎಂಬುದನ್ನು ಬಿಂಬಿಸಿದರು. ಜನರನ್ನು ಸಬಲೀಕರಣಗೊಳಿಸಲು ಸೇವೆ ಮತ್ತು ಕರುಣೆಯ ಶಕ್ತಿಯಲ್ಲಿ ನಂಬಿದ್ದರು. ವಿಕಸಿತ ಭಾರತದ ನಿರ್ಮಾಣದಲ್ಲಿ ಗಾಂಧೀಜಿ ಅವರ ಮಾರ್ಗವನ್ನು ಅನುಸರಿಸುತ್ತಿದ್ದೇವೆ' ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಮಗದೊಂದು ಪೋಸ್ಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಉಲ್ಲೇಖಿಸಿರುವ ಪ್ರಧಾನಿ, 'ಅವರ ದೃಢಸಂಕಲ್ಪವು ಸವಾಲಿನ ಸಮಯದಲ್ಲೂ ಭಾರತವನ್ನು ಬಲಪಡಿಸಿತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ 'ಜೈ ಜವಾನ್', 'ಜೈ ಕಿಸಾನ್' ಘೋಷ ಜನರಲ್ಲಿ ದೇಶಭಕ್ತಿಯನ್ನು ಹುಟ್ಟುಹಾಕಿತು. ಬಲಿಷ್ಠ ಸ್ವಾವಲಂಬಿ ದೇಶವನ್ನು ನಿರ್ಮಿಸಲು ಅವರು ನಮ್ಮನ್ನು ಪ್ರೇರೇಪಿಸುತ್ತಲೇ ಇದ್ದಾರೆ' ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಗೆ ಗೌರವ ನಮನವನ್ನು ಸಲ್ಲಿಸಿದ್ದಾರೆ.

'ಶಸ್ತ್ರವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದ ಮಹಾತ್ಮ ಗಾಂಧಿ, ತನ್ನ ವೈರಿಗಳಿಗೂ ಮಾನವೀಯತೆಯ ಕಣ್ಣುತೆರೆಸಿದ ಮಹಾನ್ ಸಂತ, ಧರ್ಮದ ಹಾದಿಯಲ್ಲಿ ನಡೆಸಿದ ದಾರ್ಶನಿಕ. ಜಗದ ಕಷ್ಟಗಳಿಗೆಲ್ಲ ಮರುಗುತ್ತಿದ್ದ ಬಾಪುವಿನ ಹೃದಯದೊಳಗೆ ಅದೆಷ್ಟು ಕರುಣೆ, ಪ್ರೀತಿ ತುಂಬಿತ್ತೆಂದು ಊಹಿಸುವುದು ಅಸಾಧ್ಯ. ಸತ್ಯ, ಶಾಂತಿ, ಸಹನೆ, ಸರ್ವಧರ್ಮ ಸಮಭಾವ ಗಾಂಧೀಜಿಯವರ ಚಿಂತನೆಗಳಾಗಿರಲಿಲ್ಲ, ಅದು ಜೀವನ ಮಾರ್ಗವಾಗಿತ್ತು. ಜಗತ್ತು ಹಿಂಸೆ, ಅಶಾಂತಿಗಳ ದಾಳಿಗೆ ಒಳಗಾದಾಗಲೆಲ್ಲ ಮತ್ತೆ ಮತ್ತೆ ನೆನಪಾಗುವವರು ಗಾಂಧಿ. ಇಂದು ಮಹಾತ್ಮ ಗಾಂಧಿಯವರ ಜನ್ಮದಿನ. ಅವರ ಸೇವೆ, ಸಮರ್ಪಣಾಭಾವ, ತ್ಯಾಗ, ಬಲಿದಾನವನ್ನು ಅತ್ಯಂತ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ' ಎಂದು ಹೇಳಿದ್ದಾರೆ.

ಮಗದೊಂದು ಪೋಸ್ಟ್‌ನಲ್ಲಿ 'ಬ್ರಿಟಿಷರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸಿಡಿದೆದ್ದು ದೇಶದ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪರಕೀಯರ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಿದ ನಂತರವೂ ಸಾರ್ವಜನಿಕ ಬದುಕಿನಿಂದ ವಿಮುಖರಾಗಲಿಲ್ಲ. ಬಡತನ, ಅನಕ್ಷರತೆ, ಸಾಮಾಜಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತದ ಪುನಶ್ಚೇತನಕ್ಕಾಗಿ ಸಕ್ರಿಯ ರಾಜಕಾರಣ ಸೇರಿ ರಾಷ್ಟ್ರನಿರ್ಮಾಣಕ್ಕಾಗಿ ದುಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು ಭಾರತೀಯರೆಲ್ಲರಿಗೂ ಪ್ರೇರಣಾದಾಯಕ. ನಿಪುಣ ರಾಜನೀತಿಜ್ಞ, ದಕ್ಷ ಆಡಳಿತಗಾರ, ಮಾಜಿ ಪ್ರಧಾನಿ ಶಾಸ್ತ್ರಿಯವರಿಗೆ ಜಯಂತಿಯ ನಮನಗಳು' ಎಂದು ಬರೆದುಕೊಂಡಿದ್ದಾರೆ.

ಇಂದು ವಿಜಯದಶಮಿ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ಸೇರಿದಂತೆ ಗಣ್ಯರು ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.