ADVERTISEMENT

ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ: ದೇಣಿಗೆ ಕುಸಿತ

ಮೃತ್ಯುಂಜಯ ಬೋಸ್
Published 27 ಆಗಸ್ಟ್ 2019, 3:01 IST
Last Updated 27 ಆಗಸ್ಟ್ 2019, 3:01 IST
ಗಣೇಶೋತ್ಸವದ ಸಂರ್ಭದಲ್ಲಿ ಪೂಜೆಗೊಳ್ಳಲಿರುವ ಮೂರ್ತಿಯ ಸಾಗಾಟದ ದೃಶ್ಯ
ಗಣೇಶೋತ್ಸವದ ಸಂರ್ಭದಲ್ಲಿ ಪೂಜೆಗೊಳ್ಳಲಿರುವ ಮೂರ್ತಿಯ ಸಾಗಾಟದ ದೃಶ್ಯ   

ಮುಂಬೈ: ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತದ ಬಿಸಿಯು ಮುಂಬೈ ಹಾಗೂ ಇತರ ಉಪನಗರಗಳ ಗಣೇಶ ಮಂಡಳಿಗಳನ್ನೂ ತಟ್ಟಿದೆ. ಗಣೇಶೋತ್ಸವ ಆಚರಣೆಗೆ ಈ ಮಂಡಳಗಳಿಗೆ ಕಾರ್ಪೊರೇಟ್‌ ವಲಯದಿಂದ ಲಭಿಸುತ್ತಿದ್ದ ಪ್ರಾಯೋಜಕತ್ವ ಹಾಗೂ ದೇಣಿಗೆಯ ಪ್ರಮಾಣವು ಶೇ 25ರಷ್ಟು ಕುಸಿದಿದೆ.

ಚಿನ್ನದ ಬೆಲೆ ₹ 40 ಸಾವಿರದ ಆಸುಪಾಸಿಗೆ (10ಗ್ರಾಂಗೆ) ಏರಿಕೆಯಾಗಿರುವುದರಿಂದ ಚಿನ್ನದ ರೂಪದಲ್ಲಿ ಬರುವ ಕಾಣಿಕೆಯ ಪ್ರಮಾಣವೂ ಕಡಿಮೆಯಾಗಬಹುದು ಎಂದು ಮಂಡಳಿಗಳು ನಿರೀಕ್ಷಿಸಿವೆ.

‘ಗಣೇಶೋತ್ಸವ ಪ್ರತಿ ವರ್ಷವೂ ಬರುತ್ತದೆ. ಅದು ಜನರ ಹಬ್ಬ, ಜನಸಾಮಾನ್ಯರು ತಮ್ಮ ವೇತನದ ಪೂರ್ತಿ ಹಣವನ್ನು ಖರ್ಚು ಮಾಡಿಯಾದರೂ ಗಣೇಶನನ್ನು ಬರಮಾಡಿಕೊಂಡು ಭಕ್ತಿಯಿಂದ ಪೂಜಿಸುತ್ತಾರೆ’ ಎಂದು ಬೃಹನ್‌ ಮುಂಬೈ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿಯ ಅಧ್ಯಕ್ಷ ನರೇಶ್‌ ದಹಿಭಾವ್ಕರ್‌ ಹೇಳುತ್ತಾರೆ.

ADVERTISEMENT

‘ಆದರೆ, ಸಾರ್ವಜನಿಕ ಗಣೇಶ ಮಂಡಳಿಗಳಿಗೆ ದೊಡ್ಡ ಕಂಪನಿಗಳು, ವಿಶೇಷವಾಗಿ ಅಟೊಬೈಲ್‌, ಗೃಹಬಳಕೆ ವಸ್ತುಗಳ ತಯಾರಿಕಾ ಸಂಸ್ಥೆಗಳು ಹಾಗೂ ರಿಯಲ್‌ಎಸ್ಟೇಟ್‌ ಕ್ಷೇತ್ರದಿಂದ ಬರುವ ದೇಣಿಗೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ನೋಟು ರದ್ದತಿಯ ನಂತರ ಇದರ ಪ್ರಮಾಣ ಕಡಿಮೆಯಾಗಿತ್ತು. ಈ ವರ್ಷ ಇನ್ನೂ ದೊಡ್ಡ ಸಮಸ್ಯೆ ಎದುರಿಸುತ್ತಿವೆ’ ಎಂದು ದಹಿಭಾವ್ಕರ್‌ ಹೇಳಿದರು.

‘ಮುಂಬೈಯಲ್ಲಿ ನೋಂದಾಯಿತ ಸುಮಾರು 13,000 ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿವೆ. ಪ್ರತಿವರ್ಷವೂ ಈ ಸಂಖ್ಯೆ ಏರಿಕೆಯಾಗುತ್ತದೆ. ಗಣೇಶೋತ್ಸವ ಎಂಬುದು ಬಹುದೊಡ್ಡ ಮಾರುಕಟ್ಟೆ. ಮೂರ್ತಿ ತಯಾರಿಕೆಯಿಂದ ಆರಂಭಿಸಿ ಅದರ ಸಾಗಾಣಿಕೆ, ಅಲಂಕಾರ ಸಾಮಗ್ರಿ ತಯಾರಿಕೆ, ಹೂವು–ಹಣ್ಣು, ಸಿಹಿ ತಿಂಡಿ, ಚಿನ್ನಾಭರಣ... ಈ ವರ್ಷ ಎಲ್ಲ ಕ್ಷೇತ್ರಗಳ ವಹಿವಾಟಿನಲ್ಲೂ ಗಣನೀಯ ಇಳಿಕೆ ದಾಖಲಾಗಿದೆ’ ಎಂದು ಮುಂಬೈ ಮಾರುಕಟ್ಟೆ ತಜ್ಞ ಅಜಿತ್‌ ಜೋಶಿ ಹೇಳುತ್ತಾರೆ.

‘ಅನೇಕ ಗಣೇಶ ಮಂಡಳಿಗಳು ಉತ್ಸವದ ಸಂದರ್ಭದಲ್ಲಿ ರಕ್ತದಾನ ಮುಂತಾದ ಸಮಾಜಸೇವಾ ಚಟುವಟಿಕೆಗಳನ್ನೂ ಮಾಡುತ್ತವೆ. ಕಳೆದ ವರ್ಷ ಕೇರಳದ ನೆರೆ ಸಂತ್ರಸ್ತರಿಗಾಗಿ ನಾವು ಸುಮಾರು ಮೂರು ಕೋಟಿ ರೂಪಾಯಿ ಸಂಗ್ರಹಿಸಿದ್ದೆವು. ಈ ವರ್ಷ ಸಾಂಗ್ಲಿ, ಕೊಲ್ಲಾಪುರ ಹಾಗೂ ಸತಾರಾ ಜಿಲ್ಲೆಗಳ ನೆರೆ ಪೀಡಿತರಿಗಾಗಿ ಕನಿಷ್ಠ ₹ 10 ಕೋಟಿ ನೆರವು ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ದಹಿಭಾವ್ಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.