ADVERTISEMENT

ಸತ್ತ ಸೊಳ್ಳೆಗಳು ತುಂಬಿದ್ದ ಬಾಟಲಿಯೊಂದಿಗೆ ಕೋರ್ಟ್‌ಗೆ ಬಂದ ಕೈದಿ!

ಮನವಿ ತಿರಸ್ಕರಿಸಿದ ನ್ಯಾಯಾಲಯ

ಪಿಟಿಐ
Published 4 ನವೆಂಬರ್ 2022, 13:24 IST
Last Updated 4 ನವೆಂಬರ್ 2022, 13:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್‌ ಬಾಟಲಿಯಲ್ಲಿ ತುಂಬಿಕೊಂಡು ನ್ಯಾಯಾಲಯಕ್ಕೆ ಬಂದ ವಿಚಾರಣಾಧೀನ ಕೈದಿ ಹಾಗೂ ಗ್ಯಾಂಗ್‌ಸ್ಟರ್ ರೌಡಿ ಎಜಾಜ್‌ ಲಕಡಾವಾಲಾನನ್ನು ಕಂಡ ಇಡೀ ನ್ಯಾಯಾಲಯವೇ ಒಂದು ಕ್ಷಣ ಅವಾಕ್ಕಾಯಿತು. ನವಿ ಮುಂಬೈತಲೋಜಾ ಜೈಲಿನ ಸ್ಥಿತಿಯನ್ನು ನ್ಯಾಯಾಲಯಕ್ಕೆ ತೋರಿಸಲು ‘ಸಾಕ್ಷ್ಯಾಧಾರ’ಗಳನ್ನು ಆತ ತಂದಿದ್ದ.

ಆದರೆ, ಆತನ ಈ ಪ್ರಯತ್ನ ಫಲಿಸಲಿಲ್ಲ. ತಮ್ಮನ್ನು ಬಂಧಿಯಾಗಿರುಸಿರುವ ಕೋಣೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ಸೊಳ್ಳೆಪರದೆಯನ್ನು ಬಳಸಲು ಅನುಮತಿ ನೀಡಬೇಕು ಎಂದು ಕೋರಿ ಲಕಡಾವಾಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕಾರಣಕ್ಕಾಗಿ ಅವರು ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್‌ ಬಾಟಲಿಯಲ್ಲಿ ಸೊಳ್ಳೆಗಳನ್ನು ತಂದಿದ್ದ. ಆದರೆ, ನ್ಯಾಯಾಲಯವು ಭದ್ರತಾ ಕಾರಣಗಳನ್ನು ನೀಡಿ ಲಕಡಾವಾಲಾ ಮನವಿಯನ್ನು ಗುರುವಾರ ತಿರಸ್ಕರಿಸಿತು.

ಹಲವು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಲಕಡಾವಾಲಾ, ಭೂಗತಪಾತಕಿ ದಾವುದ್‌ ಇಬ್ರಾಹಿಂನ ಸಹಚರ. 2020ರ ಜನವರಿಯಲ್ಲಿ ಲಕಡಾವಾಲಾನನ್ನು ಪೊಲೀಸರು ಬಂಧಿಸಿ, ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಿದ್ದರು. ಅವರ ವಿರುದ್ಧ ಹಲವು ಪ್ರಕರಣಗಳ ತನಿಖೆ ನಡೆಯುತ್ತಿದೆ.

ADVERTISEMENT

‘ನಾನು 2020ರಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾಗ, ಸೊಳ್ಳೆಪರದೆಯನ್ನು ಬಳಸಲು ನನಗೆ ಅನುಮತಿ ನೀಡಲಾಗಿತ್ತು. ಆದರೆ, ಈ ವರ್ಷದ ಮೇ ತಿಂಗಳಿನಲ್ಲಿ, ಭದ್ರತಾ ಕಾರಣ ನೀಡಿ, ಜೈಲು ಅಧಿಕಾರಿಗಳು ನನಗೆ ನೀಡಿದ್ದ ಸೊಳ್ಳೆಪರದೆಯನ್ನು ವಾಪಸ್ ಪಡೆದುಕೊಂಡರು’ ಎಂದು ಲಕಡಾವಾಲಾ ಅರ್ಜಿಯಲ್ಲಿ ತಿಳಿಸಿದ್ದ.

‘ಒಡೊಮಸ್ ಅಥವಾ ಇಂಥ ಸೊಳ್ಳೆ ನಿರೋಧಕಗಳನ್ನು ಬಳಸಿ’ ಎಂದು ನ್ಯಾಯಾಲಯವು ಲಕಡಾವಾಲಾಗೆ ತಿಳಿಸಿತು.

ಸೊಳ್ಳೆಪರದೆ: ಹಲವು ಅರ್ಜಿಗಳ ತಿರಸ್ಕಾರ
ಗ್ಯಾಂಗ್‌ಸ್ಟರ್‌ ಎಜಾಜ್‌ ಲಕಡಾವಾಲಾನಂತೆ ತಲೋಜಾ ಜೈಲಿನ ಹಲವು ಕೈದಿಗಳು ಸೊಳ್ಳೆಕಾಟದ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೆಲವರ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದೆ. ಕೆಲವರದ್ದನ್ನು ತಿರಸ್ಕರಿಸಿದೆ.

ಗ್ಯಾಂಗ್‌ಸ್ಟರ್‌ ಡಿ.ಕೆ. ರಾವ್‌ ಸೊಳ್ಳೆಪರದೆ ನೀಡುವಂತೆ ಅರ್ಜಿ ಸಲ್ಲಿಸಿದ್ದ. ಈ ಮನವಿಯನ್ನು ಒಬ್ಬ ನ್ಯಾಯಾಧೀಶರು ಸಮ್ಮತಿಸಿದ್ದರೆ, ಇನ್ನೊಬ್ಬ ನ್ಯಾಯಾಧೀಶರು ತಿರಸ್ಕರಿಸಿದ್ದರು.

ಎಲ್ಗಾರ್‌ ಪರಿಷತ್ ಪ್ರಕರಣದಲ್ಲಿ ಬಂಧಿಯಾಗಿರುವ ಕೆಲವರಿಗೂ ಸೊಳ್ಳೆಪರದೆ ಬಳಕೆಗೆ ಅನುಮತಿ ನೀಡಲಿಲ್ಲ. ಗೌತಮ್‌ ನವಲಖಾ ಅವರು ಇದೇ ಸೆಪ್ಟೆಂಬರ್‌ನಲ್ಲಿ ಸೊಳ್ಳೆಪರದೆ ಬಳಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಇನ್ನೂ ಬಾಕಿ ಇದೆ.

ಸೊಳ್ಳೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೈಲು ಅಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.