ADVERTISEMENT

ಗ್ಯಾಂಗ್‌ಸ್ಟರ್‌ಗೆ ಸತ್ಕಾರ, ಢಾಬಾದಲ್ಲಿ ಊಟ: ಪುಣೆಯ ನಾಲ್ವರು ಪೊಲೀಸರು ಅಮಾನತು

ಪಿಟಿಐ
Published 14 ಮೇ 2025, 16:26 IST
Last Updated 14 ಮೇ 2025, 16:26 IST
<div class="paragraphs"><p>ಅಮಾನತು</p></div>

ಅಮಾನತು

   

ಪುಣೆ: ನಗರದ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್‌ ಗಜಾನನ ಮಾರ್ನೆಯನ್ನು ಮತ್ತೊಂದು ಜೈಲಿಗೆ ಕರೆದೊಯ್ಯುವ ವೇಳೆ 'ವಿಶೇಷ ಸತ್ಕಾರ' ನೀಡಿದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಮಾರ್ನೆಯನ್ನು ಭದ್ರತೆಯ ಕಾರಣದಿಂದ ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹದಿಂದ ಸಂಗೋಲಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆ ವೇಳೆ, ಆತನಿಗೆ ಅನುಕೂಲ ಮಾಡಿಕೊಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮಾರ್ನೆ ಜೊತೆಗಿದ್ದ ಪೊಲೀಸರ ತಂಡ ಮಾರ್ಗ ಮಧ್ಯೆ ಢಾಬಾ ಬಳಿ ವಾಹನ ನಿಲ್ಲಿಸಿತ್ತು. ಪೊಲೀಸರ ವಾಹನ ಹಿಂಬಾಲಿಸಿಕೊಂಡು ಬಂದಿದ್ದ, ಮಾರ್ನೆ ಸಹಚರರು ಊಟ ಮಾಡಿಸಿದ್ದರು ಎನ್ನಲಾಗಿದೆ.

'ಸಹಾಯಕ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಅಪರಾಧ ದಳದ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿದ್ದೇವೆ' ಎಂದು ಪುಣೆ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ತಿಳಿಸಿದ್ದಾರೆ.

'ಪೊಲೀಸ್ ಬೆಂಗಾವಲು ವಾಹನವನ್ನು ಹಿಂಬಾಲಿಸಿಕೊಂಡು ಬಂದು, ಗ್ಯಾಂಗ್‌ಸ್ಟರ್‌ಗೆ ವಿಶೇಷ ಆತಿಥ್ಯ ನೀಡಲು ನೆರವಾದವರ ವಿರುದ್ಧ ಎಂಸಿಒಸಿಎ ಅಡಿಯಲ್ಲಿ ಕ್ರಮ ಜರುಗಿಸುತ್ತೇವೆ' ಎಂದು ಮಾಹಿತಿ ನೀಡಿದ್ದಾರೆ.

ಅಪರಾಧಿಗಳನ್ನು, ಅದರಲ್ಲೂ ಎಂಸಿಒಸಿಎ ಅಡಿಯಲ್ಲಿ ಬಂಧನಕ್ಕೊಳಗಾದವರನ್ನು ವೈಭವೀಕರಿಸುವುದನ್ನು ಸಹಿಸುವುದಿಲ್ಲ. ಸ್ಪಷ್ಟ ಹಾಗೂ ಬಲವಾದ ಸಂದೇಶ ರವಾನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್‌ ಸೂರಜ್‌ ಕುಮಾರ್‌ ರಾಜಗುರು, ಕಾನ್‌ಸ್ಟೆಬಲ್‌ಗಳಾದ ಮಹೇಶ್‌ ಬಂಗುಡೆ, ಸಚಿನ್‌ ಮೆಮಾನೆ, ರಮೇಶ್‌ ಮೆಮಾನೆ ಹಾಗೂ ರಾಹುಲ್‌ ಪರ್ದೇಶಿ ಅಮಾನತಾದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.