ಶರದ್ ಮೊಹುಲ್
ಪುಣೆ: ಪುಣೆ ಜಿಲ್ಲೆಯ ಕುಖ್ಯಾತ ಗ್ಯಾಂಗ್‌ಸ್ಟರ್ ಶರದ್ ಮೊಹುಲ್‌ನನ್ನು (40) ಆತನ ಸಹವರ್ತಿಗಳೇ ಗುಂಡಿಕ್ಕಿ ಸಾಯಿಸಿರುವ ಘಟನೆ ಖೊತ್ರೂಡ್ ಬಳಿ ಶುಕ್ರವಾರ ನಡೆದಿದೆ.
ಶರದ್ ಶುಕ್ರವಾರ ತನ್ನ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದ. ಈ ವೇಳೆ ಏಕಾಏಕಿ ದಾಳಿ ನಡೆಸಿದ ಹಂತಕರು ಮೂರು ಸುತ್ತಿನ ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡಿದ್ದ ಶರದ್ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಂತಕರ ಪತ್ತೆಗೆ ಬಲೆ ಬೀಸಲಾಗಿದ್ದು, ಶಂಕಿತ ಒಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವನ್ನು ಶರದ್ ಎದುರಿಸುತ್ತಿದ್ದ. ಯರವಾಡ್ ಜೈಲಿನಲ್ಲಿ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತ ಎಂದು ಹೇಳಲಾಗಿದ್ದ ಮೊಹಮ್ಮದ್ ಖಾತೀಲ್ ಸಿದ್ಧಿಖಿ ಎಂಬುವವನ ಕೊಲೆ ಮಾಡಿದ್ದ ಆರೋಪ ಆತ ಎದುರಿಸುತ್ತಿದ್ದ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ದೇವೇಂದ್ರ ಫಡಣವೀಸ್ ಅವರು, ಇದು ಗ್ಯಾಂಗ್ ವಾರ್ ಅಲ್ಲ. ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾಂಗ್ ವಾರ್‌ಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.