ADVERTISEMENT

ಪಾಕ್ ಪ್ರಧಾನಿ ಇಮ್ರಾನ್ ನನ್ನ ದೊಡ್ಡಣ್ಣ ಎಂದು ಹೇಳಿದ ಸಿಧುಗೆ ಗಂಭೀರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 13:37 IST
Last Updated 21 ನವೆಂಬರ್ 2021, 13:37 IST
ಗೌತಮ್ ಗಂಭೀರ್
ಗೌತಮ್ ಗಂಭೀರ್   

ನವದೆಹಲಿ: ಪಾಕಿಸ್ತಾನ ಪ್ರಧಾನಿಯನ್ನು ತಮ್ಮ ದೊಡ್ಡಣ್ಣ ಎಂದು ಕರೆದಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ದೆಹಲಿ ಸಂಸದ ಗೌತಮ್ ಗಂಭೀರ್ ಗುಡುಗಿದ್ದಾರೆ.ಮೊದಲು ನಿಮ್ಮ ಮಕ್ಕಳನ್ನು ಗಡಿ ಪ್ರದೇಶಕ್ಕೆ ಕಳುಹಿಸಿ. ಅದಾದ ಬಳಿಕ ಇಮ್ರಾನ್ ಖಾನ್ ಅವರನ್ನು 'ದೊಡ್ಡಣ್ಣ' ಎಂದು ಕರೆಯಿರಿ ಎಂದು ಕುಟುಕಿದ್ದಾರೆ.

ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದ ವೇಳೆ ಸಿಧು ಈ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಭೀರ್, ‘ನವಜೋತ್ ಸಿಂಗ್ ಸಿಧು ಅವರು ಮೊದಲು ಅವರ ಮಕ್ಕಳನ್ನು ಗಡಿ ಭಾಗಕ್ಕೆ ಕಳುಹಿಸಬೇಕು. ಅವರ ಮಕ್ಕಳು ಸೇನೆಯಲ್ಲಿ ಇದ್ದಿದ್ದರೆ, ಆಗಲೂ ಇಮ್ರಾನ್ ನನ್ನ ದೊಡ್ಡ ಅಣ್ಣ ಎಂದು ಸಿಧು ಹೇಳುತ್ತಿದ್ದರೇ?‘ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಕ್ರಿಕೆಟಿಗರೂ ಆಗಿರುವ ಗಂಭೀರ್, ‘ಕಳೆದ ಒಂದು ತಿಂಗಳಲ್ಲಿ40 ನಾಗರಿಕರು ಮತ್ತು ಯೋಧರು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಆದರೆ, ಈ ಬಗ್ಗೆ ಅವರು (ಸಿಧು) ಮಾತನಾಡುವುದಿಲ್ಲ. ಪಾಕಿಸ್ತಾನ ಸೇನೆ ಮುಖ್ಯಸ್ಥ ಬಜ್ವಾ ಅವರನ್ನು ಆಲಂಗಿಸುತ್ತಾರೆ. ಕರ್ತಾರ್‌ಪುರ ಸಾಹಿಬ್‌ಗೆ ತೆರಳಿ ಇಮ್ರಾನ್ ಖಾನ್ ಅವರನ್ನು ದೊಡ್ಡಣ್ಣ ಎನ್ನುತ್ತಾರೆ. ದೇಶದ ರಕ್ಷಣೆ ಬಯಸುವವರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೇಶದ ರಕ್ಷಣೆಯನ್ನು ಬಯಸುತ್ತಿದ್ದರು. ಆದರೆ ಅವರಿಗೆ ಸಹಕಾರ ನೀಡಲಿಲ್ಲ. ಇದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಬೇರೇನಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮುಂದುವರಿದು,‘ಸಿಧು ಯಾವ ರೀತಿಯ ರಾಜಕೀಯ ಮಾಡುತ್ತಿದ್ದಾರೆ ಎಂಬುದನ್ನು ದೇಶದ ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಶ್ವಾಸದಲ್ಲಿದ್ದೇನೆ. ಅವರು (ಸಿಧು) ಅಮರೀಂದರ್ ಸಿಂಗ್, ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಾರೆ‘ ಎಂದೂ ಟೀಕಿಸಿದ್ದಾರೆ.

ಸಿಧು ಏನು ಹೇಳುತ್ತಾರೆ ಎಂಬುದರ ಬಗ್ಗೆ ಮತ್ತು ಅವಕಾಶ ಸಿಕ್ಕಾಗಲೆಲ್ಲ ಪಾಕಿಸ್ತಾನಕ್ಕೆ ತೆರಳುತ್ತಾರೆ ಎಂಬುದರ ಬಗ್ಗೆ ಜನರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.