ADVERTISEMENT

ಜನರಲ್ ರಾವತ್ ಬದುಕುಳಿದಿದ್ದರು, ನೀರು ಕೇಳುತ್ತಿದ್ದರು ಎಂದ ಪ್ರತ್ಯಕ್ಷದರ್ಶಿ

ಐಎಎನ್ಎಸ್
Published 9 ಡಿಸೆಂಬರ್ 2021, 13:29 IST
Last Updated 9 ಡಿಸೆಂಬರ್ 2021, 13:29 IST
ಕೂನೂರಿನಲ್ಲಿ ಭಾರತದ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡ ಪ್ರದೇಶ
ಕೂನೂರಿನಲ್ಲಿ ಭಾರತದ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡ ಪ್ರದೇಶ   

ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತದ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡ ಬೆನ್ನಲ್ಲೇ ಸ್ಥಳಕ್ಕೆ ಮೊದಲು ತಲುಪಿದ ಜನರ ಗುಂಪಿನಲ್ಲಿದ್ದ ಗ್ರಾಮಸ್ಥರೊಬ್ಬರು ಹೇಳಿಕೆ ನೀಡಿದ್ದು, ತಾವು ನೋಡಿದಾಗ ಜನರಲ್ ಬಿಪಿನ್ ರಾವತ್ ಬದುಕುಳಿದಿದ್ದರು ಮತ್ತು ನೀರು ಕೊಡಿ ಎಂದು ಕೇಳುತ್ತಿದ್ದರು ಎಂದು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿ ಶಿವಕುಮಾರ್ ಹೇಳಿಕೆಯನ್ನು ಸುದ್ದಿ ಸಂಸ್ಥೆ 'ಐಎಎನ್‌ಎಸ್' ವರದಿ ಮಾಡಿದೆ.

ಕೂನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್, 'ನಾವು ಅಪಘಾತ ನಡೆದ ತಕ್ಷಣವೇ ಸ್ಥಳಕ್ಕೆ ತಲುಪಿದ್ದೇವೆ. ಮೂವರು ಜೀವಂತವಾಗಿರುವುದನ್ನು ನೋಡಿದ್ದೇವೆ. ಅವರಲ್ಲಿ ಒಬ್ಬರು ನೀರು ಕೊಡಿ ಎಂದು ಕೇಳುತ್ತಿದ್ದರು. ನಮ್ಮಲ್ಲಿ ನೀರು ಇರಲಿಲ್ಲ. ಆದರೆ ತಕ್ಷಣವೇ ಮೂವರನ್ನು ಪ್ರತ್ಯೇಕ ಕಂಬಳಿಯಲ್ಲಿ ಹೊತ್ತುಕೊಂಡು ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ಸಾಗಿಸಿದೆವು' ಎಂದು ಹೇಳಿದ್ದಾರೆ.

'ಅವರು ಜನರಲ್ ರಾವತ್ ಎಂದು ನನಗೆ ತಿಳಿದಿರಲಿಲ್ಲ. ಆದರೆ ಬಿಪಿನ್ ರಾವತ್ ದಿವಂಗತ ಫೋಟೊಗಳು ಹೊರಬಂದ ಬಳಿಕ ಮಾತ್ರ ಅವರನ್ನು ಗುರುತಿಸಲು ಸಾಧ್ಯವಾಯಿತು' ಎಂದು ಶಿವಕುಮಾರ್ ತಿಳಿಸಿದ್ದಾರೆ.

ಗ್ರಾಮಸ್ಥರಾದ ಶಿವಕುಮಾರ್, ಕೃಷ್ಣಮೂರ್ತಿ ಮತ್ತು ಎಂ. ರವಿಕುಮಾರ್ ಹೆಲಿಕಾಪ್ಟರ್ ಪತನದ ಶಬ್ದ ಕೇಳಿ ಸ್ಥಳಕ್ಕೆ ಮೊದಲು ಧಾವಿಸಿದ್ದರು. ಈ ವೇಳೆ ಹೆಲಿಕಾಪ್ಟರ್ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡಿದ್ದರು.

ಬುಧವಾರ ಭಾರತೀಯ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ ಪತನದಿಂದಾಗಿ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್ ರಾವತ್‌ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.