
ಅಮೆರಿಕ ಪಡೆಗಳು ಜೂನ್‌ನಲ್ಲಿ ನಡೆಸಿದ ದಾಳಿಯಲ್ಲಿ ಇರಾನ್‌ನ ಇಸ್‌ಫಹಾನ್ ಪರಮಾಣು ಶುದ್ಧೀಕರಣ ಘಟಕಕ್ಕೆ ಹಾನಿಯಾಗಿರುವುದು
2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಕೆಲವು ದೇಶಗಳ ನಡುವೆ ಈ ಹಿಂದೆಯೇ ಆರಂಭವಾಗಿದ್ದ ಯುದ್ಧ ಈ ವರ್ಷವೂ ಮುಂದುವರಿದರೆ, ಮತ್ತೆ ಹಲವು ದೇಶಗಳ ನಡುವೆ ಹೊಸದಾಗಿ ಸಂಘರ್ಷಗಳೂ ನಡೆದಿವೆ. ಹೀಗಾಗಿ, ಸಾವು–ನೋವಿನ ಜೊತೆಗೆ ಲಕ್ಷಾಂತರ ಜನರು ನಿರಾಶ್ರಿತಗೊಂಡು ಇನ್ನಿಲ್ಲದ ಸಂಕಷ್ಟ ಎದುರಿಸಿದರು. ಭಾರತ ಕೂಡ ಈ ವರ್ಷ ಸೇನಾ ಸಂಘರ್ಷಕ್ಕೆ ಸಾಕ್ಷಿಯಾಯಿತು. ಪಾಕಿಸ್ತಾನದೊಂದಿಗೆ ದೊಡ್ಡ ಪ್ರಮಾಣದಲ್ಲಿಯೇ ನಾಲ್ಕು ದಿನಗಳವರೆಗೆ ಶಸ್ತ್ರಾಸ್ತ್ರ ಸಂಘರ್ಷ ನಡೆಸಿತು
ಮಂಡಿಯೂರಿದ ಪಾಕಿಸ್ತಾನ
ಲಷ್ಕರ್–ಎ–ತಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು 26 ಪ್ರವಾಸಿಗರನ್ನು ಹತ್ಯೆ ಮಾಡಿದ ಪೈಶಾಚಿಕ ಕೃತ್ಯಕ್ಕೆ ಪ್ರತೀಕಾರವಾಗಿ ಮೇ 7ರ ತಡರಾತ್ರಿ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ (ಪಿಒಕೆ) 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ‘ಆಪರೇಷನ್ ಸಿಂಧೂರ’ ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಸಂಘರ್ಷವನ್ನು ಹುಟ್ಟುಹಾಕಿತು. ನಾಲ್ಕು ದಿನಗಳ ಸಂಘರ್ಷದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು, ಡ್ರೋನ್‌ಗಳು ವ್ಯಾಪಕವಾಗಿ ಬಳಕೆಯಾದವು. ಭಾರತ ಇದೇ ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಪ್ರಯೋಗಿಸಿ ಪಾಕಿಸ್ತಾನದ ಬಲವನ್ನೇ ಉಡುಗಿಸಿತು.
ಭಾರತದ ಮೇಲೆ ಚೀನಾ, ಟರ್ಕಿ ನಿರ್ಮಿತ ಕ್ಷಿಪಣಿಗಳು, ಡ್ರೋನ್‌ಗಳ ಮೂಲಕ ಬಾಂಬ್‌ಗಳ ಸುರಿಮಳೆಗೈದ ಪಾಕಿಸ್ತಾನದ ದಾಳಿಯನ್ನು ಭಾರತವು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಪಾಕ್ ದಾಳಿಯ ಸದ್ದಡಗಿಸಿದ್ದು ನಮ್ಮ ಸಮಗ್ರ ವಾಯು ರಕ್ಷಣಾ ವ್ಯವಸ್ಥೆ (ಇಂಟೆಗ್ರೇಟೆಡ್ ಏರ್ ಡಿಫೆನ್ಸ್ ಸಿಸ್ಟಮ್–ಐಎಡಿಡಬ್ಲ್ಯುಎಸ್). ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿ ವ್ಯವಸ್ಥೆ, ರಷ್ಯಾ ನಿರ್ಮಿತ ಎಸ್–400 ಕ್ಷಿಪಣಿ ವ್ಯವಸ್ಥೆ, ಇದರೊಂದಿಗೆ ದೇಶೀಯ ಆಕಾಶ್‌ತೀರ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆ ಹಾಗೂ ಸಮಗ್ರ ವಾಯು ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಯು ರಕ್ಷಾ ಕವಚದಂತೆ ಕಾರ್ಯನಿರ್ವಹಿಸಿದ್ದವು. ಹೀಗಾಗಿ ನಮ್ಮಲ್ಲಿ ಹೆಚ್ಚು ಸಾವು ನೋವು ಸಂಭವಿಸಲಿಲ್ಲ.
ಭಾರತದ ಸೇನಾ ಪಡೆಗಳ ದಾಳಿಯನ್ನು ತಡೆಯಲು ಪಾಕಿಸ್ತಾನ ಸಂಪೂರ್ಣವಾಗಿ ವಿಫಲವಾಯಿತು. ಅದರ ಹಲವು ವಾಯುನೆಲೆಗಳು, ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಭಾರತ ನಡೆಸಿದ ದಾಳಿಗಳು ನಿಖರವಾಗಿ ಗುರಿ ತಲುಪಿ ಪಾಕಿಸ್ತಾನಕ್ಕೆ ಭಾರಿ ಪ್ರಮಾಣದ ಹಾನಿ ಉಂಟುಮಾಡಿದವು. ಮೇ 10ರಂದು ದಿಢೀರ್ ಕದನ ವಿರಾಮ ಘೋಷಣೆಯಾಯಿತು. ಪಾಕಿಸ್ತಾನವು ಕರೆ ಮಾಡಿ ಕದನ ವಿರಾಮದ ಪ್ರಸ್ತಾಪ ಮಾಡಿದ್ದರಿಂದ ತಾನು ಇದಕ್ಕೆ ಒಪ್ಪಿಕೊಂಡಿದ್ದಾಗಿ ಭಾರತ ಹೇಳಿತು.
ಈ ಯುದ್ಧವನ್ನು ತಾನು ನಿಲ್ಲಿಸಿದ್ದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಹಲವು ಬಾರಿ ಹೇಳಿಕೊಂಡರು. ಭಾರತ ಪ್ರತಿಬಾರಿಯೂ ಇದನ್ನು ತಿರಸ್ಕರಿಸಿತು. ಆಪರೇಷನ್ ಸಿಂಧೂರ ಮತ್ತು ನಂತರದ ಸೇನಾ ಸಂಘರ್ಷವು ಶತ್ರುವಿನ ಗುರಿಯೆಡೆಗೆ ನಿಖರವಾಗಿ ದಾಳಿ ನಡೆಸುವ ಭಾರತದ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿತು.
ಇಸ್ರೇಲ್ ಹಮಾಸ್ ಕದನ
2023ರ ಅಕ್ಟೋಬರ್ 7ರಂದು ಇಸ್ರೇಲ್‌ನ ರೀಮ್ ನಗರದಲ್ಲಿ ಸೂಪರ್ ನೋವಾ ಸಂಗೀತ ಉತ್ಸವ ನಡೆಯುತ್ತಿದ್ದ ವೇಳೆ ಹಮಾಸ್ ಬಂಡುಕೋರರು ಏಕಾಏಕಿ ದಾಳಿ ನಡೆಸಿದ್ದರು. ಅಂದಿನಿಂದ ಆರಂಭಗೊಂಡ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕದನ ಈ ವರ್ಷಾರಂಭದಲ್ಲಿ ಇನ್ನಷ್ಟು ತೀವ್ರಗೊಂಡಿತಲ್ಲದೆ ಯುದ್ಧ ಬೇರೆ ರಾಷ್ಟ್ರಗಳಿಗೂ ವಿಸ್ತರಿಸಿತು. ಇರಾನ್–ಇಸ್ರೇಲ್ ನಡುವೆ 12 ದಿನಗಳ ಭಾರಿ ಯುದ್ಧವೇ ಏರ್ಪಟ್ಟಿತು. ಲೆಬನಾನ್, ಸಿರಿಯಾದಲ್ಲಿನ ಬಂಡುಕೋರ ಸಂಘಟನೆಗಳನ್ನು ಗುರಿಯಾಗಿಸಿಕೊಂಡೂ ಇಸ್ರೇಲ್ ದಾಳಿ ನಡೆಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ನವೆಂಬರ್‌ನಲ್ಲಿ ಕದನ ವಿರಾಮ ಮತ್ತು ಶಾಂತಿ ಒಪ್ಪಂದಕ್ಕೆ ಇಸ್ರೇಲ್ ನಾಯಕರು ಹಾಗೂ ಹಮಾಸ್ ಬಂಡಕೋರರು ಸಮ್ಮತಿಸಿದ್ದಾರೆ. ಸಂಘರ್ಷವು ತಾತ್ಕಾಲಿಕವಾಗಿ ಶಮನವಾಗುವ ಹೊತ್ತಿಗೆ ಇಡೀ ಗಾಜಾ ಪಟ್ಟಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಮುಚ್ಚಿ ಹೋಗಿತ್ತು. 70 ಸಾವಿರಕ್ಕೂ ಹೆಚ್ಚು ಜನರು ಪ್ರಾಣಕಳೆದುಕೊಂಡಿದ್ದರು. ಇವರಲ್ಲಿ 18 ಸಾವಿರದಷ್ಟು ಮಕ್ಕಳು. 21 ಲಕ್ಷ ಜನಸಂಖ್ಯೆ ಇರುವ ಗಾಜಾದಲ್ಲಿ 19 ಲಕ್ಷ ಜನರು ನಿರಾಶ್ರಿತರಾಗಿದ್ದರು.
ಇಸ್ರೇಲ್ – ಇರಾನ್ ಸಂಘರ್ಷ
ಈ ವರ್ಷ ಜಾಗತಿಕವಾಗಿ ಗಮನಸೆಳೆದ ಮತ್ತೊಂದು ಯುದ್ಧವೆಂದರೆ ಜೂನ್ ತಿಂಗಳಲ್ಲಿ ವೈರಿರಾಷ್ಟ್ರಗಳಾದ ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳ ನಡೆದಿದ್ದ ಸೇನಾ ಸಂಘರ್ಷ. ಎರಡೂ ರಾಷ್ಟ್ರಗಳು ಕ್ಷಿಪಣಿಗಳು, ಡ್ರೋನ್‌ಗಳ ಮೂಲಕ ಪರಸ್ಪರ ದಾಳಿ ನಡೆಸಿ ಇಡೀ ಜಗತ್ತನ್ನೇ ಆತಂಕಕ್ಕೆ ಕೆಡವಿದ್ದವು. ಜೂನ್ 12ರಂದು ಇರಾನಿನ ಪರಮಾಣು ವಿಜ್ಞಾನಿಗಳು, ಸೇನಾಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಿಢೀರ್ ದಾಳಿಯು ಇರಾನ್ ಆಡಳಿತವನ್ನು ಕೆರಳಿಸಿತು. ಪ್ರತಿಯಾಗಿ ಅದು ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ಇಸ್ರೇಲ್‌ನ ಮೇಲೆ ಬಾಂಬ್‌ಗಳ ಸುರಿಮಳೆಗೆರೆಯಿತು.
ಎರಡೂ ರಾಷ್ಟ್ರಗಳು ಸಂಘರ್ಷವನ್ನು ಕೊನೆಗಾಣಿಸಬೇಕು ಎಂದು ಹೇಳುತ್ತಲೇ ಬಂದಿದ್ದ ಅಮೆರಿಕವು ಜೂನ್ 22ರಂದು ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಭೂಗತ ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡು ಬಿ2 ಬಾಂಬರ್ ವಿಮಾನಗಳ ಮೂಲಕ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಜೂನ್ 23ರಂದು ಕತಾರ್‌ನ ಅಲ್ ಉದೈದ್‌ನಲ್ಲಿರುವ ಅಮೆರಿಕದ ವಾಯು ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಅಮೆರಿಕದ ನಿರಂತರದ ಒತ್ತಡದ ನಡುವೆ ಮರುದಿನ ಇಸ್ರೇಲ್, ಇರಾನ್ ಕದನವಿರಾಮ ಘೋಷಿಸಿದವು.
ರಷ್ಯಾ–ಉಕ್ರೇನ್ ಸಮರ
2022ರ ಫೆಬ್ರುವರಿ 24ರಂದು ರಷ್ಯಾವು ಯುರೋಪಿನ ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ದಾಳಿ ನಡೆಸುವುದರೊಂದಿಗೆ ಆರಂಭಗೊಂಡ ಎರಡೂ ರಾಷ್ಟ್ರಗಳ ಯುದ್ಧ ಇನ್ನೂ ನಿಂತಿಲ್ಲ. ಈ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಯುದ್ಧವನ್ನು ಕೊನೆಗಾಣಿಸುವ ರಾಜತಾಂತ್ರಿಕ ಪ್ರಯತ್ನಗಳು ಆರಂಭಗೊಂಡವು. ಆದರೆ, ಅದಿನ್ನೂ ಫಲ ನೀಡಿಲ್ಲ. ಯುದ್ಧವನ್ನು ನಿಲ್ಲಿಸುವ ಒತ್ತಡ ತಂತ್ರವಾಗಿ ಟ್ರಂಪ್ ಅವರು ಉಕ್ರೇನ್‌ಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದಿಲ್ಲ ಎಂಬ ಘೋಷಣೆ ಮಾಡಿದರು. ಹಾಗಿದ್ದರೂ ಯುದ್ಧ ನಿಲ್ಲಲಿಲ್ಲ. 2025ರ ಅಂತ್ಯದ ಹೊತ್ತಿಗೆ ಈ ಯುದ್ಧವು ಅಪಾರ ಪ್ರಮಾಣದ ಆಸ್ತಿ ಹಾನಿಯೊಂದಿಗೆ 15 ಲಕ್ಷಕ್ಕೂ ಹೆಚ್ಚು ಜನರ ಪ್ರಾಣಕ್ಕೆ ಕುತ್ತು ತಂದಿದೆ.
ಇತರ ಸಂಘರ್ಷಗಳು
l ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಗಡಿ ವಿಚಾರವಾಗಿ ಈ ವರ್ಷ ಎರಡು ಬಾರಿ ಸೇನಾ ಸಂಘರ್ಷ ನಡೆಸಿವೆ. ಮೇ 28ರಂದು ‘ಎಮರಾಲ್ಡ್ ಟ್ರಯಾಂಗಲ್’ ಎಂಬ ಪ್ರದೇಶದಲ್ಲಿ ಎರಡೂ ಸೇನೆಗಳ ನಡುವೆ ಸಂಘರ್ಷ ನಡೆದಿತ್ತು. ಆ ಪ್ರದೇಶದ ಒಡೆತನದ ಬಗ್ಗೆ ಎರಡೂ ರಾಷ್ಟ್ರಗಳು ಹಕ್ಕು ಸಾಧಿಸುತ್ತಿವೆ. ಜುಲೈನಲ್ಲಿ ಪುನಃ ಐದು ದಿನ ತೀವ್ರ ಸಂಘರ್ಷ ನಡೆದಿತ್ತು. ಚೀನಾ, ಅಮೆರಿಕ, ಮಲೇಷ್ಯಾದ ಪ್ರಯತ್ನದಿಂದಾಗಿ ನಂತರ ಕದನ ವಿರಾಮ ಘೋಷಿಸಲಾಗಿತ್ತು. ಡಿಸೆಂಬರ್ 7ರಂದು ಮತ್ತೆ ಉಭಯ ದೇಶಗಳ ನಡುವೆ ಸಂಘರ್ಷ ಆರಂಭವಾಗಿದೆ. ಈ ವರ್ಷ 80ಕ್ಕೂ ಹೆಚ್ಚು ಜನರು ಮೃತಪಟ್ಟು, ಎಂಟು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ
l ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಪಡೆಗಳ ನಡುವೆ ಅಕ್ಟೋಬರ್ ಮೊದಲ ವಾರ ಭಾರಿ ಸಂಘರ್ಷ ನಡೆದಿತ್ತು. ಅಫ್ಗನ್‌ನ 19 ಗಡಿ ಭದ್ರತಾ ಠಾಣೆಗಳು ಮತ್ತು ‘ಭಯೋತ್ಪಾದಕರ ಅಡಗುತಾಣ’ಗಳನ್ನು ವಶಪಡಿಸಿಕೊಂಡಿದ್ದಾಗಿ ಪಾಕ್ ಸೇನೆ ಹೇಳಿತ್ತು. ತಾನು ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 58 ಸೈನಿಕರು ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಗಾನಿಸ್ತಾನ ಹೇಳಿಕೊಂಡಿತ್ತು.
l ಸುಡಾನ್‌ನಲ್ಲಿ 2023ರಿಂದ ಸೇನೆಯ ವಿರುದ್ಧ ಅರೆಸೇನಾ ಕ್ಷಿಪ್ರ ಕಾರ್ಯಪಡೆ (ಆರ್‌ಎಸ್‌ಎಫ್) ಸಶಸ್ತ್ರ ಹೋರಾಟ ನಡೆಸುತ್ತಿದೆ. ಈ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಸುಡಾನ್‌ನ ಕೊರ್ಡೊಫಾನ್‌ನ ಶಿಶುವಿಹಾರ ಮತ್ತು ಇತರ ಸ್ಥಳಗಳ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ 63 ಮಕ್ಕಳು ಸೇರಿದಂತೆ 114 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಹೇಳಿದೆ. ಅಕ್ಟೋಬರ್‌ನಲ್ಲಿ ನಿರಾಶ್ರಿತರ ಶಿಬಿರವೊಂದರ ಮೇಲೆ ನಡೆದ ದಾಳಿಯಲ್ಲಿ 60 ಮಂದಿ ಮೃತಪಟ್ಟಿದ್ದರು.
ಡ್ರೋನ್ ಬಳಕೆ ವ್ಯಾಪಕ
ಸೇನಾ ಸಮರದಲ್ಲಿ ಈ ವರ್ಷ ಡ್ರೋನ್‌ಗಳು ವ್ಯಾಪಕವಾಗಿ ಬಳಕೆಯಾದವು. ಮಾನವರಹಿತ ಡ್ರೋನ್‌ಗಳನ್ನೇ ಬಾಂಬ್‌ಗಳ ರೀತಿಯಲ್ಲಿ ಹಲವು ದೇಶಗಳು ಬಳಸಿದವು. ತಂತ್ರಜ್ಞಾನ ಆಧಾರಿತ, ಸ್ವಯಂ ಆಗಿ ಕಾರ್ಯನಿರ್ವಹಿಸಬಲ್ಲ ತಲುಪಬಲ್ಲ ಹಾಗೂ ನಿಗದಿತ ಗುರಿಗೆ ನಿಖರವಾಗಿ ದಾಳಿ ನಡೆಸಬಲ್ಲ ಡ್ರೋನ್ ಮತ್ತು ಕ್ಷಿಪಣಿಗಳ ಅಭಿವೃದ್ಧಿಯತ್ತ ಎಲ್ಲ ರಾಷ್ಟ್ರಗಳು ಗಮನಹರಿಸುವಂತೆ ಆಧುನಿಕ ರಣಾಂಗಣಗಳು ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.