ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ರಾಯಪುರ: ಯಾವುದೇ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಪ್ರತಿಕ್ರಿಯಿಸುವ ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಛತ್ತೀಸಗಢದ ನವ ರಾಯಪುರದಲ್ಲಿ ಬ್ರಹ್ಮಕುಮಾರಿಯರ ಆಧ್ಯಾತ್ಮಿಕ ಕಲಿಕೆ ಮತ್ತು ಧ್ಯಾನಕ್ಕಾಗಿ ಶಾಂತಿ ಶಿಖರ ಕೇಂದ್ರವನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯಗಳ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು ತಮ್ಮ ಸರ್ಕಾರದ ಮಂತ್ರವಾಗಿದೆ ಎಂದು ಹೇಳಿದರು.
‘ಇಂದು ಜಗತ್ತಿನಲ್ಲಿ ಎಲ್ಲಿಯಾದರೂ ಬಿಕ್ಕಟ್ಟು ಉಂಟಾದಾಗ, ವಿಪತ್ತು ಸಂಭವಿಸಿದಾಗಲೆಲ್ಲ ಸಹಾಯ ಒದಗಿಸಲು ಭಾರತ ವಿಶ್ವಾಸಾರ್ಹ ಪಾಲುದಾರ ದೇಶವಾಗಿ ಮುಂದೆ ಬರುತ್ತದೆ. ಭಾರತ ಯಾವಾಗಲೂ ಮೊದಲು ಪ್ರತಿಕ್ರಿಯೆ ನೀಡುವ ದೇಶವಾಗಿದೆ’ ಎಂದು ಮೋದಿ ಹೇಳಿದ್ದಾರೆ.
‘ನಾವು ಪ್ರತಿಯೊಂದು ಜೀವಿಯಲ್ಲೂ ಶಿವನನ್ನು ನೋಡುವವರು’ ಎಂದ ಮೋದಿ, ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಧಾರ್ಮಿಕ ಆಚರಣೆಯು ಜಗತ್ತು ಸಮೃದ್ಧಿಯಾಗಲಿ ಮತ್ತು ಎಲ್ಲ ಜೀವಿಗಳಲ್ಲಿ ಸದ್ಭಾವನೆ ಮೇಲುಗೈ ಸಾಧಿಸಲಿ ಎಂಬ ಘೋಷಣೆಯೊಂದಿಗೆ ಕೊನೆಗೊಳ್ಳುತ್ತದೆ’ಎಂದಿದ್ದಾರೆ.
‘ರಾಜ್ಯಗಳ ಅಭಿವೃದ್ಧಿಯು ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬ ಮಂತ್ರದಿಂದ ಮಾರ್ಗದರ್ಶಿಸಲ್ಪಟ್ಟ ಸರ್ಕಾರವು ಭಾರತವನ್ನು ಅಭಿವೃದ್ಧಿಗೊಳಿಸಲು ವಿಕಸಿತ ಭಾರತ್ ಮಿಷನ್‌ನಲ್ಲಿ ತೊಡಗಿಸಿಕೊಂಡಿದೆ. ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಈ ನಿರ್ಣಾಯಕ ಪ್ರಯಾಣದಲ್ಲಿ, ಬ್ರಹ್ಮ ಕುಮಾರಿಯರಂತಹ ಸಂಸ್ಥೆಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ’ ಎಂದಿದ್ದಾರೆ.
‘ನಾನು ನಿಮ್ಮೆಲ್ಲರೊಂದಿಗೆ ಹಲವು ದಶಕಗಳಿಂದ ಸಂಪರ್ಕ ಹೊಂದಿದ್ದೇನೆ. ನಾನು ಇಲ್ಲಿ ಅತಿಥಿಯಲ್ಲ ನಾನು ನಿಮ್ಮಲ್ಲಿ ಒಬ್ಬ’ಎಂದು ಅವರು ಸಭೆಯನ್ನುದ್ದೇಶಿಸಿ ಹೇಳಿದರು.
‘ಇಂದಿನ ದಿನವು ತುಂಬಾ ವಿಶೇಷವಾಗಿದೆ. ಇಂದು, ಛತ್ತೀಸ್ಗಢ ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸುತ್ತಿದೆ. ಜಾರ್ಖಂಡ್ ಮತ್ತು ಉತ್ತರಾಖಂಡ ಕೂಡ 25 ವರ್ಷಗಳನ್ನು ಪೂರೈಸುತ್ತಿವೆ. ಇತರ ಹಲವು ರಾಜ್ಯಗಳು ಸಹ ಇಂದು ತಮ್ಮ ಸಂಸ್ಥಾಪನಾ ದಿನವನ್ನು ಆಚರಿಸುತ್ತಿವೆ’ಎಂದು ಮೋದಿ ಹೇಳಿದರು.
ಇದಕ್ಕೂ ಮೊದಲು, 'ದಿಲ್ ಕಿ ಬಾತ್' ಕಾರ್ಯಕ್ರಮದ ಭಾಗವಾಗಿ, ನವ ರಾಯಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ 'ಜೀವನದ ಉಡುಗೊರೆ' ಸಮಾರಂಭದಲ್ಲಿ ಜನ್ಮಜಾತ ಹೃದಯ ಕಾಯಿಲೆಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ಪಡೆದ 2,500 ಮಕ್ಕಳೊಂದಿಗೆ ಮೋದಿ ಸಂವಾದ ನಡೆಸಿದರು. ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.