ADVERTISEMENT

ಇರಾನ್‌–ಅಮೆರಿಕ ಸಂಘರ್ಷ ತೀವ್ರ: ಭಾರತದ ಬಜೆಟ್‌ಗೆ ಬರೆ

ಕಮಾಂಡರ್‌ ಸುಲೇಮಾನಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 20:52 IST
Last Updated 3 ಜನವರಿ 2020, 20:52 IST
ಬಾಗ್ದಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೆರಿಕದ ದಾಳಿಯ ಬಳಿಕ ವಾಹನಗಳು ಉರಿಯುತ್ತಿರುವ ಚಿತ್ರವನ್ನು ಇರಾಕ್‌ ಪ್ರಧಾನಿ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದೆ
ಬಾಗ್ದಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೆರಿಕದ ದಾಳಿಯ ಬಳಿಕ ವಾಹನಗಳು ಉರಿಯುತ್ತಿರುವ ಚಿತ್ರವನ್ನು ಇರಾಕ್‌ ಪ್ರಧಾನಿ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದೆ   

ನವದೆಹಲಿ: ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ (62) ಅವರನ್ನು ಅಮೆರಿಕ ಶುಕ್ರವಾರ ಹತ್ಯೆ ಮಾಡಿದೆ. ಇದು ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಿಸುವುದರ ಜತೆಗೆ, ಭಾರತದ ಅರ್ಥ ವ್ಯವಸ್ಥೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

ಬಾಗ್ದಾದ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ, ಡ್ರೋನ್‌ ಮೂಲಕ ಕ್ಷಿಪಣಿ ದಾಳಿ ನಡೆಸಿ ಸುಲೇಮಾನಿಯ ಹತ್ಯೆ ನಡೆಸಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆದೇಶದಂತೆ ಈ ಕಾರ್ಯಾಚರಣೆ ನಡೆದಿದೆ ಎಂದು ಅಮೆರಿಕ ಹೇಳಿದೆ. ಇದು, ಎರಡು ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟ್ರಗಳಾದ ಅಮೆರಿಕ ಮತ್ತು ಇರಾನ್‌ ನಡುವೆ ಸಂಘರ್ಷ ತೀವ್ರವಾಗುವ ಭೀತಿ ಸೃಷ್ಟಿಸಿದೆ.

ತಕ್ಷಣದ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಡಾಲರ್‌ಗೆ ಶೇ 4.5ರಷ್ಟು ಏರಿಕೆಯಾಗಿ, 68.23 ಡಾಲರ್‌ಗೆ (₹4,895) ತಲುಪಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಮೇಲೆ ರೂಪಾಯಿಯ ಮೌಲ್ಯ 42 ಪೈಸೆಯಷ್ಟು ಕುಸಿದು ₹71.80ಕ್ಕೆ ತಲುಪಿದೆ. ಇದು ಒಂದೂವರೆ ತಿಂಗಳ ಲ್ಲಿಯೇ ಅತ್ಯಂತ ದೊಡ್ಡ ಕುಸಿತ. ಹೂಡಿಕೆ ದಾರರಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿ, ಅವುಗಳ ಬೆಲೆಯೂ ಏರಿಕೆಯಾಗಿದೆ.

ADVERTISEMENT

ಮುಂದಿನ ದಿನಗಳಲ್ಲಿ ಇದು ಸಂಚಾರ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಪೆಟ್ರೋಲ್, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಲಿದೆ. ಕೊಲ್ಲಿ ಯಲ್ಲಿ ಸಂಘರ್ಷ ಶಮನವಾಗದೇ ಇದ್ದರೆ ಎರಡನೇ ಹಂತದ ಪರಿಣಾಮಗಳನ್ನು ಎದುರಿಸಲು ಭಾರತ ಸಜ್ಜಾಗಬೇಕಾಗುತ್ತದೆ. ತೈಲ ಆಮದಿನ ಮೇಲೆ ದೇಶವು ಮಾಡಬೇಕಾದ ವೆಚ್ಚ ವಿಪರೀತ ಮಟ್ಟದಲ್ಲಿ ಏರಿಕೆಯಾಗಬಹುದು.

ಹಣ ದುಬ್ಬರ ಏರಬಹುದು, ಸರ್ಕಾರದ ವರಮಾನದಲ್ಲಿ ಅಸಮತೋಲನವಾಗಬಹುದು. ಚಾಲ್ತಿ ಖಾತೆ, ಆರ್ಥಿಕ ಕೊರತೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಲ್ಲಿನ ಕೊರತೆ ಏರಿಕೆಯಾಗಬಹುದು. ಅಗತ್ಯ ಇರುವ ತೈಲದ ಶೇ 80ಕ್ಕಿಂತ ಹೆಚ್ಚು ಭಾಗವನ್ನು ಭಾರತವು ಆಮದು ಮಾಡಿಕೊಳ್ಳುತ್ತಿರುವುದರಿಂದ ಈ ಪರಿ ಣಾಮಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.

ಕೇಂದ್ರ ಸರ್ಕಾರದ ಬಜೆಟ್‌ ರೂಪುಗೊಳ್ಳುವ ಸಂದರ್ಭದಲ್ಲಿಯೇ ಈ ಬಿಕ್ಕಟ್ಟು ಎದುರಾಗಿದೆ. ಹಾಗಾಗಿ, ದೊಡ್ಡ ಮಟ್ಟದ ತೆರಿಗೆ ವಿನಾಯಿತಿ, ಅರ್ಥ ವ್ಯವಸ್ಥೆಯ ಚೇತರಿಕೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಇದು ನಿರ್ಬಂಧಿಸಬಹುದು. ತೈಲದ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚುತ್ತಿರುವುದರ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಈಗಾಗಲೇ ಕಳವಳ ವ್ಯಕ್ತಪಡಿಸಿದೆ. ಅರ್ಥ ವ್ಯವಸ್ಥೆಯ ಪ್ರಗತಿ ನಿಧಾನವಾಗಿಯೇ ಇದ್ದರೂ ಬಡ್ಡಿದರ ಕಡಿತದ ಕ್ರಮಗಳನ್ನು ಕೈಗೊಳ್ಳುವುದು ಆರ್‌ಬಿಐಗೆ ಸಾಧ್ಯವಾಗದಿರಬಹುದು.

ಹಾಗಾಗಿಯೇ, ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವಂತೆ ಭಾರತ ಕರೆ ಕೊಟ್ಟಿದೆ. ಸಂಘರ್ಷ ಮುಂದುವರಿದರೆ ಇರಾನ್‌ನಿಂದ ತೈಲ ಪೂರೈಕೆಗೆ ತೊಡಕಾಗಬಹುದು. ಅಷ್ಟೇ ಅಲ್ಲದೆ, ಇದು ಇರಾಕ್‌ ಮತ್ತು ಸೌದಿ ಪ್ರದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾಗಬಹುದು. ಅಮೆರಿಕದಿಂದ ಭಾರತಕ್ಕೆ ಜಲ ಮಾರ್ಗದ ಮೂಲಕ ಆಗುವ ತೈಲ ಪೊರೈಕೆಯನ್ನು ಇರಾನ್‌ ಗುರಿ ಮಾಡಿಕೊಳ್ಳುವ ಅಪಾಯವೂ ಇದೆ.

ಇರಾನ್‌ ಮೇಲೆ ಅವಲಂಬನೆ: ಇರಾನ್‌ನಿಂದ ತೈಲ ಖರೀದಿ ಮಾಡಬಾರದು ಎಂದು ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಲೇ ಇದೆ. ಹಾಗಿದ್ದರೂ ಭಾರತಕ್ಕೆ ತೈಲ ಪೂರೈಸುವ ಪ್ರಮುಖ ದೇಶಗಳಲ್ಲಿ ಇರಾನ್‌ ಕೂಡ ಒಂದು. 2018–19ರಲ್ಲಿ ಇರಾನ್‌ನಿಂದ 2.3 ಕೋಟಿ ಟನ್ ತೈಲ ಆಮದಾಗಿದೆ. ಇದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಹೆಚ್ಚು. ಇರಾಕ್‌ ಮತ್ತು ಸೌದಿ ಅರೇಬಿಯಾದ ನಂತರ ಅತಿ ಹೆಚ್ಚು ತೈಲ ಪೂರೈಸುವ ದೇಶ ಇರಾನ್‌. ಅಮೆರಿಕದಿಂದ ಕೂಡ ಭಾರತವು ಗಣನೀಯ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.

ಕಚ್ಚಾತೈಲ: ಬೆಲೆ ಏರಿಕೆ ಬಿಸಿ

ಕಚ್ಚಾತೈಲ ಬೆಲೆಯಲ್ಲಿ 10 ಡಾಲರ್‌ (₹717) ಏರಿಕೆಯಾದರೆ ಹಣದುಬ್ಬರ ಶೇ 0.49 ರಷ್ಟು ಏರಿಕೆಯಾಗುತ್ತದೆ. ಆರ್ಥಿಕ ಕೊರತೆಯು ಶೇ 0.43 ರಷ್ಟು ಹೆಚ್ಚುತ್ತದೆ ಎಂದು ಆರ್‌ಬಿಐ ಹೇಳಿದೆ. ಕಳೆದ ಡಿಸೆಂಬರ್‌ 2ರ ಬಳಿಕ ಕಚ್ಚಾ ತೈಲದ ಬೆಲೆ ಶೇ 14ರಷ್ಟು ಏರಿಕೆಯಾಗಿದೆ. ಹಾಗಾಗಿ, ಈಗಿನ ಪರಿಸ್ಥಿತಿಯೇ ಭಾರತದ ಬಜೆಟ್‌ ಲೆಕ್ಕಾಚಾರವನ್ನು ಏರುಪೇರಾಗಿಸಬಹುದು. ಬಜೆಟ್‌ನಲ್ಲಿನ ಯಾವುದೇ ದೊಡ್ಡ ರಿಯಾಯಿತಿಗೆ ಕೊಕ್ಕೆ ಹಾಕಬಹುದು.

ಸೌದಿಯ ಅರಾಮ್ಕೊ ಕಂಪನಿಯ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ದಾಳಿಯಾದಾಗ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 71.95 ಡಾಲರ್‌ ಆಗಿತ್ತು. ಅದರ ಬಳಿಕ, ಈಗ ಬಹುತೇಕ ಅದೇ ಮಟ್ಟಕ್ಕೆ ದರ ಏರಿಕೆಯಾಗಿದೆ.

ಅಂಕಿ –ಅಂಶಗಳು
162 ಅಂಶ: ಷೇರುಪೇಟೆ ಸಂವೇದಿ ಸೂಚ್ಯಂಕ ಕುಸಿತ
42 ಪೈಸೆ: ಡಾಲರ್ ಎದುರು ರೂಪಾಯಿ ವಿನಿಮಯ ದರ ಇಳಿಕೆ
4 %: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ
83 %: ಭಾರತವು ತನ್ನ ಕಚ್ಚಾ ತೈಲ ಅಗತ್ಯದಲ್ಲಿ ಆಮದು ಮಾಡಿಕೊಳ್ಳುವ ಪ್ರಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.