ADVERTISEMENT

'ಗೋ ಬ್ಯಾಕ್' ವಿಜಯವರ್ಗೀಯ; ಪ.ಬಂಗಾಳ ಬಿಜೆಪಿ ಕಚೇರಿಯ ಹೊರಗಡೆ ಪೋಸ್ಟರ್

ಪಿಟಿಐ
Published 18 ಜೂನ್ 2021, 16:39 IST
Last Updated 18 ಜೂನ್ 2021, 16:39 IST
ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ
ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ವಿರುದ್ಧ 'ಗೋ ಬ್ಯಾಕ್' ಪೋಸ್ಟರ್‌ಗಳು ಶುಕ್ರವಾರ ಕೋಲ್ಕತ್ತದ ಪ್ರಧಾನ ಕಚೇರಿಯ ಹೊರಗಡೆ ಕಂಡುಬಂದಿದೆ.

ಸೆಂಟ್ರಲ್ ಅವೆನ್ಯೂನಲ್ಲಿರುವ ಪಕ್ಷದ ಪ್ರಧಾನ ಕಚೇರಿ ಹಾಗೂ ಹೇಸ್ಟಿಂಗ್‌ನಲ್ಲಿರುವ ಕಚೇರಿಯ ಹೊರಗಡೆ ವಿಜಯವರ್ಗೀಯ ಫೋಟೊಗಳು ಕಂಡುಬಂದಿದ್ದು, 'ಸೆಟ್ಟಿಂಗ್ ಮಾಸ್ಟರ್' ಎಂದು ಆರೋಪಿಸಲಾಗಿದೆ.

ವಿಜಯವರ್ಗೀಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಉಸ್ತುವಾರಿ ಹೊಣೆ ವಹಿಸುತ್ತಿದ್ದಾರೆ. ವಿಜಯವರ್ಗೀಯ ಮುಕುಲ್ ಜತೆಗಿರುವ ಪೋಸ್ಟರ್‌ಗಳು ಕಂಡುಬಂದಿದೆ.

ADVERTISEMENT

ಮೂರು ವರೆ ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಮುಕುಲ್ ರಾಯ್, ಇತ್ತೀಚೆಗಷ್ಟೇ ಪಕ್ಷ ತೊರೆದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದರು. ಈ ಮೂಲಕ ತಮ್ಮ ಮೂಲ ಪಕ್ಷಕ್ಕೆ ಹಿಂತಿರುಗಿದ್ದರು.

ಬಳಿಕ ಪೋಸ್ಟರ್‌ಗಳನ್ನು ಬಿಜೆಪಿ ಕಾರ್ಯಕರ್ತರು ತೆರವುಗೊಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಹಿರಿಯ ಮುಖಂಡ ರಾಹುಲ್ ಸಿನ್ಹಾ ಘಟನೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ದೂರಿದ್ದಾರೆ. ಟಿಎಂಸಿ ನಮ್ಮೊಳಗೆ ಜಗಳವನ್ನು ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಹಾಗಿದ್ದರೂ ಬಿಜೆಪಿ ನಾಯಕರ ಆರೋಪವನ್ನು ಟಿಎಂಸಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ತಳ್ಳಿ ಹಾಕಿದ್ದಾರೆ. ಬಿಜೆಪಿಯಲ್ಲಿ ಹಳೆಯ ಹಾಗೂ ಹೊಸ ನಾಯಕರ ಮಧ್ಯೆ ಆಂತರಿಕ ಕಲಹವುಂಟಾಗಿದ್ದು, ಇದರ ಪರಿಣಾಮ ಇದಾಗಿದೆ ಎಂದಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ವಿಜಯವರ್ಗೀಯ ಅವರಂತಹ ನಾಯಕರ ಅತಿಯಾದ ಹಸ್ತಕ್ಷೇಪವನ್ನು ಹಿರಿಯ ಬಿಜೆಪಿ ನಾಯಕ ತಥಾಗತ ರಾಯ್ ಬಹಿರಂಗವಾಗಿ ಖಂಡಿಸಿದ್ದರು.

ಮುಕುಲ್ ರಾಯ್ ಆಪ್ತರಾಗಿರುವ ವಿಜಯವರ್ಗಿಯ, ಹಿಂದೆ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ, ವಿಜಯವರ್ಗಿಯ ಅವರನ್ನು ಪಕ್ಷದ ಉಸ್ತುವಾರಿ ಸ್ಥಾನದಿಂದ ತೆರವುಗೊಳಿಸಬೇಕು ಎಂದು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳ ಬಿಜೆಪಿ ಘಟಕಗಳು ಬೇಡಿಕೆ ಮುಂದಿರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.