ADVERTISEMENT

3 ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು: ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಸಲಹೆ

ಕೋವಿಡ್‌ ರೋಗಿಗಳಲ್ಲಿ 3 ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು

ಪಿಟಿಐ
Published 18 ಜನವರಿ 2022, 15:17 IST
Last Updated 18 ಜನವರಿ 2022, 15:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ರೋಗಿಗಳಲ್ಲಿ ಸತತವಾಗಿ 2–3 ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಕಂಡುಬಂದರೆ ಅವರನ್ನು ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಸಲಹೆ ನೀಡಿದೆ.

ಸಚಿವಾಲಯವು ‘ವಯಸ್ಕ ಕೋವಿಡ್‌–19 ರೋಗಿಗಳ ನಿರ್ವಹಣೆಗಾಗಿ ವೈದ್ಯಕೀಯ ಮಾರ್ಗಸೂಚಿ’ಯನ್ನು ಪರಿಷ್ಕರಿಸಿದ್ದು, ಹಲವು ವಿಷಯಗಳ ಕುರಿತು ಎಚ್ಚರಿಕೆ–ಸಲಹೆಗಳನ್ನು ನೀಡಿದೆ.

ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌), ಐಸಿಎಂಆರ್‌–ಕೋವಿಡ್‌–19 ರಾಷ್ಟ್ರೀಯ ಕಾರ್ಯಪಡೆ ಹಾಗೂ ಜಂಟಿ ಮೇಲ್ವಿಚಾರಣಾ ತಂಡ (ಡಿಜಿಎಚ್‌ಎಸ್‌) ನೀಡಿರುವ ಸಲಹೆಯಂತೆ ಮಾರ್ಗಸೂಚಿಗಳನ್ನು ಸಚಿವಾಲಯ ಪರಿಷ್ಕರಿಸಿದೆ.

ADVERTISEMENT

‘ಸಾಧಾರಣದಿಂದ ತೀವ್ರ’ ಸ್ವರೂಪದ ಕೋವಿಡ್ ಇರುವವರು ಹಾಗೂ ಕೋವಿಡ್‌–19 ಲಕ್ಷಣಗಳು ಕಂಡುಬಂದ 10 ದಿನಗಳ ಒಳಗೆ ಮೂತ್ರಪಿಂಡಗಳ ಸಮಸ್ಯೆ ಕಾಣಿಸದವರಿಗೆ ‘ತುರ್ತು ಬಳಕೆಯಾಗಿ’ ರೆಮ್‌ಡಿಸಿವಿರ್ ನೀಡಬಹುದು’ ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ.

ಸ್ಟಿರಾಯ್ಡ್‌ಗಳನ್ನು ನೀಡುವುದರಿಂದ ಕೋವಿಡ್‌ ರೋಗಿಗಳಿಗೆ ಆಮ್ಲಜನಕ ನೀಡಬೇಕಾದ ಸಂದರ್ಭ ಉದ್ಭವಿಸುವುದಿಲ್ಲ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂಬ ಅಂಶದ ಬಗ್ಗೆ ಮಾರ್ಗಸೂಚಿಯಲ್ಲಿ ಗಮನ ಸೆಳೆಯಲಾಗಿದೆ.

ಅಗತ್ಯಕ್ಕಿಂತ ಮೊದಲೇ ಸ್ಟಿರಾಯ್ಡ್‌ಗಳ ಅಧಿಕ ಡೋಸ್‌ಗಳನ್ನು ನೀಡಿದರೆ ಅಥವಾ ಅಗತ್ಯಕ್ಕಿಂತಲೂ ಹೆಚ್ಚು ಕಾಲ ನೀಡಿದರೆ ಕಪ್ಪುಶಿಲೀಂಧ್ರದಂತಹ ತೀವ್ರಸ್ವರೂಪದ ಸೋಂಕು ತಗುಲುವ ಅಪಾಯ ಹೆಚ್ಚು ಎಂದೂ ಸಚಿವಾಲಯ ಎಚ್ಚರಿಸಿದೆ.

ಕೋವಿಡ್‌ ಪರೀಕ್ಷೆ ಹೆಚ್ಚಳಕ್ಕೆ ಸೂಚನೆ

ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌–19 ಪರೀಕ್ಷೆಗಳು ಇಳಿಮುಖವಾಗಿರುವ ಬಗ್ಗೆ ಗಮನಸೆಳೆದಿರುವ ಕೇಂದ್ರ ಸರ್ಕಾರ, ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಅವರು ಈ ಸಂಬಂಧ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

‘ಕೋವಿಡ್‌ ಪಿಡುಗಿನ ನಿರ್ವಹಣೆಯಲ್ಲಿ ಪರೀಕ್ಷೆಗಳು ಮಹತ್ವದ ಪಾತ್ರ ವಹಿಸುತ್ತದೆ. ಹೊಸ ಕ್ಲಸ್ಟರ್‌ಗಳು/ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಸೋಂಕು ಪ್ರಸರಣಕ್ಕೆ ಕಡಿವಾಣ ಹಾಕುವ ಸಂಬಂಧ ಕಾರ್ಯತಂತ್ರ ರೂಪಿಸಲು ಅನುಕೂಲವಾಗುವುದು’ ಎಂದೂ ವಿವರಿಸಿದ್ದಾರೆ.

ರೂಪಾಂತರಿ ಓಮೈಕ್ರಾನ್‌ ಅನ್ನು ‘ಕಳವಳಕಾರಿ ತಳಿ’ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ. ಈ ತಳಿ ಸೋಂಕು ದೇಶದಲ್ಲಿ ವೇಗವಾಗಿ ಪ್ರಸರಣಗೊಳ್ಳುತ್ತಿದೆ. ಹೀಗಾಗಿ ಕೋವಿಡ್‌ ದೃಢ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು’ ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.