ADVERTISEMENT

‘ಮಹದಾಯಿ ಯೋಜನೆ: ಗೋವಾದಲ್ಲಿ ಸಹಿ ಸಂಗ್ರಹ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 14:29 IST
Last Updated 3 ಜನವರಿ 2023, 14:29 IST
   

ಪಣಜಿ: ಮಹದಾಯಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ಒಪ್ಪಿಗೆ ನೀಡಿದ ಬೆನ್ನಲ್ಲೇ, ಗೋವಾದ ಆಡಳಿತಾರೂಢ ಬಿಜೆಪಿ ಸರ್ಕಾರವು ಯೋಜನೆಯ ವಿರುದ್ಧ ರಾಜ್ಯದಾದ್ಯಂತ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಲು ಮುಂದಾಗಿದೆ.

ಈ ಕುರಿತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸದಾನಂದ ಶೇಟ್‌ ತಾನಾವಡೆ ಅವರು ಮಂಗಳವಾರ ಘೋಷಣೆ ಮಾಡಿದರು. ‘ಈ ಅಭಿಯಾನದ ಮುಖ್ಯ ಉದ್ದೇಶ ಗೋವಾದ ಹಿತಾಸಕ್ತಿಯನ್ನು ಕಾಪಾಡುವುದು’ ಎಂದರು.

‘ಮಹದಾಯಿಯನ್ನು ರಕ್ಷಿಸುವ ಸಲುವಾಗಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುವುದು. ಡಿಪಿಆರ್‌ಗೆ ಒಪ್ಪಿಗೆ ಸಿಕ್ಕಿರುವ ಬಗ್ಗೆ ರಾಜ್ಯದ ಜನರು ಆಕ್ರೋಶಗೊಂಡಿದ್ದಾರೆ. ಇದು ಒಂದು ಏಪಕ್ಷೀಯ ನಿರ್ಧಾರವಾಗಿದೆ. ಇದರಿಂದ ಗೋವಾಕ್ಕೆ ಅನ್ಯಾಯವಾಗಲಿದೆ’ ಎಂದರು.

ADVERTISEMENT

‘ಮಹದಾಯಿ ಕುರಿತು ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ ಮುಂದಿದೆ. ಈ ಕುರಿತು ನ್ಯಾಯಾಲಯವು ಆದೇಶ ಹೊರಡಿಸುವ ವರೆಗೂ ಕೇಂದ್ರವು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ರಾಜ್ಯ ನಾಯಕತ್ವದ ನಿರ್ಧಾರವಾಗಿದೆ’ ಎಂದರು.

‘ಯೋಜನೆಗೆ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ನಿರ್ಣಯ ಕಳುಹಿಸಿಕೊಡಲಾಗುವುದು’ ಎಂದರು.

ಕೋಟ್‌..

ಗೋವಾಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪ್ರಧಾನಿ ಮೋದಿ ಅವರಿಗೆ ಪ್ರತಿಯೊಬ್ಬ ಗೋವಾ ವಾಸಿಯು ಪತ್ರ ಬರೆಯಬೇಕು

ಸದಾನಂದ ಶೇಟ್‌ ತಾನಾವಡೆ, ಗೋವಾ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.