ADVERTISEMENT

ಗೋವಾ: ಎನ್‌ಸಿಪಿ–ಶಿವಸೇನಾ ಮೈತ್ರಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 19:30 IST
Last Updated 19 ಜನವರಿ 2022, 19:30 IST
ಶರದ್‌ ಪವಾರ್‌ ಮತ್ತು ಉದ್ಧವ್‌ ಠಾಕ್ರೆ
ಶರದ್‌ ಪವಾರ್‌ ಮತ್ತು ಉದ್ಧವ್‌ ಠಾಕ್ರೆ   

ಪಣಜಿ: ಗೋವಾ ವಿಧಾನಸಭೆ ಚುನಾವಣೆಗಾಗಿ ಎನ್‌ಸಿಪಿ ಮತ್ತು ಶಿವಸೇನಾ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ. ಆದರೆ, ಮೂರು ಪಕ್ಷಗಳ ಮೈತ್ರಿ ಮಾತುಕತೆಯಿಂದ ಕಾಂಗ್ರೆಸ್‌ ಹಿಂದಕ್ಕೆ ಸರಿಯಿತು ಎಂದು ಈ ಎರಡೂ ಪಕ್ಷಗಳು ಆರೋಪಿಸಿವೆ. ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸೇರಿಕೊಂಡು ಮಹಾವಿಕಾಸ ಅಘಾಡಿ (ಎಂವಿಎ) ಎಂಬ ಮೈತ್ರಿಕೂಟ ರಚಿಸಿ ಸರ್ಕಾರ ನಡೆಸುತ್ತಿವೆ.

‘ಎಂವಿಎಯನ್ನು ಮಹಾರಾಷ್ಟ್ರದಿಂದ ಗೋವಾಕ್ಕೆ ವಿಸ್ತರಿಸಲು ನಾವು ಬಯಸಿದ್ದೆವು. ಇಲ್ಲಿ ಕಾಂಗ್ರೆಸ್‌ ಪಕ್ಷವು ಮುಖ್ಯ ಪಾತ್ರ ವಹಿಸಬಹುದಿತ್ತು. ನಾವು (ಸೇನಾ ಮತ್ತು ಎನ್‌ಸಿಪಿ) ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದಿತ್ತು’ ಎಂದು ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಹೇಳಿದ್ದಾರೆ.

‘ಕಾಂಗ್ರೆಸ್‌ ಜತೆಗೆ ಮಾತನಾಡಲು ನಾವು ಯತ್ನಿಸಿದ್ದೆವು. ಕುಳಿತು ಮಾತನಾಡೋಣ, ಈಗಿನ ಸರ್ಕಾರವನ್ನು ಎದುರಿಸಲು ಕಾರ್ಯತಂತ್ರ ರೂಪಿಸೋಣ ಎಂದಿದ್ದೆವು. ಶಿವಸೇನಾದ ಸಂಜಯ ರಾವುತ್‌ ಅವರೂ ಇಂತಹುದೇ ಮಾತು ಆಡಿದ್ದರು. ಆದರೆ, ಅವರು ‘ಆಯಿತು’ ಎಂದೂ ಹೇಳಲಿಲ್ಲ, ‘ಬೇಡ’ ಎಂದೂ ಹೇಳಲಿಲ್ಲ. ಅವರು ನಮಗೆ ಸಾಕಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡಲಿಲ್ಲ’ ಎಂದು ಪಟೇಲ್‌ ಹೇಳಿದ್ದಾರೆ.

ADVERTISEMENT

‘ಎನ್‌ಸಿಪಿ ಮತ್ತು ಸೇನಾ ಜತೆಗೆ ಸ್ಪರ್ಧಿಸಲಿವೆ. ಪ್ರತೀ ಪಕ್ಷದಿಂದ 10–12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದೇವೆ. ಮುಂದಿನ 3–4 ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ’ ಎಂದು ಅವರು ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.