ADVERTISEMENT

ನೈಟ್‌ಕ್ಲಬ್‌ | ಗೊತ್ತಿಲ್ಲದಂತೆ ಭೂಪರಿವರ್ತನೆ: ಜಮೀನಿನ ಮೂಲ ಮಾಲೀಕ ಆರೋಪ

ಪಿಟಿಐ
Published 12 ಡಿಸೆಂಬರ್ 2025, 15:57 IST
Last Updated 12 ಡಿಸೆಂಬರ್ 2025, 15:57 IST
.
.   

ಪಣಜಿ: ‘ಉಪ್ಪು ತಯಾರಿಕೆಯ ಪರಿಧಿಯಲ್ಲಿದ್ದ ನನ್ನ ಜಮೀನಿನ ಒಂದು ಭಾಗವನ್ನು ನನಗೆ ಗೊತ್ತಿಲ್ಲದಂತೆ ವಸತಿ ವಲಯಕ್ಕೆ ಭೂಪರಿವರ್ತಿಸಲಾಗಿದೆ’ ಎಂದು ಅಗ್ನಿ ಅನಾಹುತಕ್ಕೀಡಾದ ನೈಟ್‌ ಕ್ಲಬ್‌ನ ಜಾಗದ ಮೂಲ ಮಾಲೀಕರು ದೂರಿದ್ದಾರೆ.

‘ನನಗೆ ಯಾವೊಂದು ನೋಟಿಸ್‌ ನೀಡದೆ, ನನ್ನ ಜಮೀನಿನ ಭೂಪರಿವರ್ತನೆಯನ್ನು ಅಧಿಕಾರಿಗಳು ಸದ್ದಿಲ್ಲದೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸುರಿಂದರ್ ಕುಮಾರ್ ಖೋಸ್ಲಾ ಎಂಬವರೊಂದಿಗೆ 2004ರಲ್ಲಿ ಜಮೀನಿನ ಮಾರಾಟ ಒಪ್ಪಂದ ಮಾಡಿಕೊಂಡಿದ್ದೆ. ಆದರೆ, ಅವರು ಆರು ತಿಂಗಳೊಳಗೆ ಹಣವನ್ನು ಪಾವತಿಸದಿದ್ದರಿಂದ ಒಪ್ಪಂದದಿಂದ ಹಿಂದೆ ಸರಿದಿದ್ದೆ’ ಎಂದು ಉತ್ತರ ಗೋವಾದ ‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ಕ್ಲಬ್‌ನ ಜಾಗದ ಮೂಲ ಮಾಲೀಕ ಎಂದು ಹೇಳಿಕೊಂಡಿರುವ ಪ್ರದೀಪ್ ಘಾಡಿ ಅಮೋಂಕರ್ ತಿಳಿಸಿದ್ದಾರೆ.

ADVERTISEMENT

‘ಖರೀದಿ ಒಪ್ಪಂದ ಮಾಡಿಕೊಂಡ ಬಳಿಕ ಖೋಲ್ಸಾ ನನ್ನ ಜಮೀನಿನಲ್ಲಿ ನೈಟ್‌ ಕ್ಲಬ್‌ ಸ್ಥಾಪಿಸಿದ್ದರು. ನಂತರ ಅದನ್ನು ಬರ್ಚ್‌ ಬೈ ರೋಮಿಯೊ ಲೇನ್‌ ನೈಟ್‌ ಕ್ಲಬ್‌ನ ಮಾಲೀಕರಾದ ಸೌರಭ್‌ ಹಾಗೂ ಗೌರವ್‌ ಲೂಥ್ರಾ ಸ್ವಾಧೀನಪಡಿಸಿಕೊಂಡಿದ್ದರು’ ಎಂದಿದ್ದಾರೆ.

‘ಜಮೀನಿನ ವಿಷಯದಲ್ಲಿ ಖೋಸ್ಲಾ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದೇನೆ’ ಎಂದೂ ಹೇಳಿಕೊಂಡಿದ್ದಾರೆ.

‘21 ವರ್ಷಗಳಿಂದಲೂ ಅರ್ಪೋರಾದಲ್ಲಿನ ನನ್ನ ಜಮೀನನ್ನು ಮರಳಿ ಪಡೆಯಲಿಕ್ಕಾಗಿ ನ್ಯಾಯಾಲಯಗಳಲ್ಲಿ ಹೋರಾಟ ನಡೆಸಿದ್ದೇನೆ. ನನ್ನ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಕ್ಲಬ್‌ ವಿರುದ್ಧ ಹೈಕೋರ್ಟ್‌ ಮೊರೆ ಹೋಗಲು ದಾಖಲೆಗಳನ್ನು ಹೊಂದಿಸಿಕೊಳ್ಳುವಾಗ ‘ಭೂಪರಿವರ್ತನೆ’ ನಡದಿರುವುದು ಗೊತ್ತಾಗಿದೆ ಎಂದು ಅಮೋಂಕರ್‌ ಹೇಳಿದ್ದಾರೆ.

ತನಿಖೆ ನಡೆಯುತ್ತಿರುವಾಗ ಅಮೋಂಕರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಗೋವಾದ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿ.6ರ ಮಧ್ಯರಾತ್ರಿ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಜನ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.