ADVERTISEMENT

ಕೋವಿಡ್-19 ಪ್ರಕರಣಗಳ ಏರಿಕೆ: ಗೋವಾದಲ್ಲಿ ಶಾಲಾ-ಕಾಲೇಜುಗಳು ಬಂದ್

ಪಿಟಿಐ
Published 3 ಜನವರಿ 2022, 10:35 IST
Last Updated 3 ಜನವರಿ 2022, 10:35 IST
ಮುಖ್ಯಮಂತ್ರಿ ಪ್ರಮೋದ್ ಸಾವಂತ್
ಮುಖ್ಯಮಂತ್ರಿ ಪ್ರಮೋದ್ ಸಾವಂತ್   

ಪಣಜಿ: ಕರಾವಳಿ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಜನವರಿ 26ರವರೆಗೆ ಶಾಲಾ-ಕಾಲೇಜುಗಳನ್ನು ಮುಚ್ಚಲು ಗೋವಾ ಸರ್ಕಾರ ನಿರ್ಧರಿಸಿದೆ.

ಸೋಮವಾರ ಕೋವಿಡ್-19 ವಿಚಾರವಾಗಿ ನಡೆದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುದ್ದಿಗಾರರೊಂದಿಗೆ ಮಾತನಾಡಿ, ಗೋವಾ ಸರ್ಕಾರವು ರಾಜ್ಯದಲ್ಲಿ ರಾತ್ರಿ ಕರ್ಫ್ಯೂವನ್ನು ಕೂಡ ವಿಧಿಸಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಭಾನುವಾರ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ 10.7ರಷ್ಟಿತ್ತು.

ADVERTISEMENT

'ನಾಳೆಯಿಂದ ಜ. 26ರವೆರೆಗೆ 8 ರಿಂದ 9ನೇ ತರಗತಿಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಕೋವಿಡ್-19 ತಡೆ ಲಸಿಕೆಯನ್ನು ಪಡೆಯಲು ಶಾಲೆಗೆ ತೆರಳಬೇಕು. ಒಮ್ಮೆ ಅವರು ಲಸಿಕೆ ತೆಗೆದುಕೊಂಡ ಬಳಿಕ ಜ.26ರವರೆಗೆ ಮತ್ತೆ ಶಾಲೆಗೆ ತೆರಳುವ ಅಗತ್ಯವಿರುವುದಿಲ್ಲ. ಇದೇ ವೇಳೆ ರಾಜ್ಯದಲ್ಲಿ ಕಾಲೇಜುಗಳನ್ನು ಕೂಡ ಮುಚ್ಚಲಾಗುತ್ತದೆ' ಎಂದು ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶೇಖರ್ ಸಲ್ಕಾರ್ ತಿಳಿಸಿದ್ದಾರೆ.

'ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ 11ರಿಂದ ಬೆಳಗ್ಗೆ 6ಗಂಟೆವರೆಗೆ ನೈಟ್ ಕರ್ಫ್ಯೂವನ್ನು ವಿಧಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಇಂದು ಅಥವಾ ಮಂಗಳವಾರ ಆದೇಶ ಹೊರಡಿಸಲಿದೆ. ವಾರದ ಪಾಸಿಟಿವಿಟಿ ಪ್ರಮಾಣ ಶೇ 5ರಷ್ಟಿದ್ದು, ನಿರ್ಬಂಧಗಳನ್ನು ವಿಧಿಸಲು ತೀರ್ಮಾನಿಸಲಾಗಿದೆ' ಎಂದಿದ್ದಾರೆ.

ಗೋವಾದಲ್ಲಿ ಭಾನುವಾರ ಹೊಸದಾಗಿ 388 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,81,570ಕ್ಕೆ ಏರಿದೆ. ಇದೇ ವೇಳೆ ಒಬ್ಬರು ಸಾವಿಗೀಡಾಗಿದ್ದು, ಈವರೆಗೂ 3523 ಮಂದಿ ಸಾವಿಗೀಡಾಗಿರುವುದಾಗಿ ಅಧಿಕೃತ ಮಾಹಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.