ADVERTISEMENT

ಬಾಲಿಕಾಗೃಹಗಳ ಮಕ್ಕಳ ಮೇಲಿನ ಅತ್ಯಾಚಾರ: ನಾಗೇಶ್ವರ ರಾವ್‌ಗೆ ‘ಸುಪ್ರೀಂ’ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 18:53 IST
Last Updated 7 ಫೆಬ್ರುವರಿ 2019, 18:53 IST
   

ನವದೆಹಲಿ:ಸಿಬಿಐನ ಹೆಚ್ಚುವರಿ ನಿರ್ದೇಶಕ ಎಂ.ನಾಗೇಶ್ವರ ರಾವ್‌ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಕೊಟ್ಟಿದೆ.

ಬಿಹಾರದ ಮುಜಫ್ಫರ್‌ಪುರ ಪುನರ್ವಸತಿ ಕೇಂದ್ರದ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಹಾಗಿದ್ದರೂ, ತನಿಖಾಧಿಕಾರಿಯಾಗಿದ್ದ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರನ್ನುಸಿಬಿಐನ ಮಧ್ಯಂತರ ನಿರ್ದೇಶಕರಾಗಿದ್ದ ನಾಗೇಶ್ವರ ರಾವ್‌ ವರ್ಗಾಯಿಸಿದ್ದರು.

ADVERTISEMENT

‘ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ನ್ಯಾಯಾಲಯದ ಆದೇಶದ ಜತೆಗೆ ಆಟವಾಡುವುದು ಬೇಡ. ನಿಮ್ಮನ್ನು ದೇವರೇ ರಕ್ಷಿಸಬೇಕು. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

ರಾವ್‌ ಅವರ ಜತೆಗೆ ಸಿಬಿಐನ ತನಿಖಾ ವಿಭಾಗದ ನಿರ್ದೇಶಕರೂ ಇದೇ 12ರಂದು ವಿಚಾರಣೆಗೆ ಹಾಜರಾಗಬೇಕು. 11ರೊಳಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದೆ.ಸಿಬಿಐ ನಿರ್ದೇಶಕರಾಗಿದ್ದ ಅಲೋಕ್‌ ವರ್ಮಾ ಮತ್ತು ಹೆಚ್ಚುವರಿ ನಿರ್ದೇಶಕರಾಗಿದ್ದ ರಾಕೇಶ್‌ ಅಸ್ತಾನಾ ಅವರ ನಡುವಣ ಕಚ್ಚಾಟದ ಸಂದರ್ಭದಲ್ಲಿ ಅವರಿಬ್ಬರನ್ನೂ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ನಾಗೇಶ್ವರ ರಾವ್‌ ಅವರನ್ನು ಮಧ್ಯಂತರ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಮಧ್ಯಂತರ ನಿರ್ದೇಶಕರಾದ ಸಮಯದಲ್ಲಿ ಹಲವು ಅಧಿಕಾರಿಗಳನ್ನು ರಾವ್‌ ಅವರು ವರ್ಗ ಮಾಡಿದ್ದರು.

ದೆಹಲಿಗೆ ಪ್ರಕರಣ ವರ್ಗಾವಣೆ
ಮುಜಫ್ಫರ್‌ಪುರದ ಪುನರ್ವಸತಿ ಕೇಂದ್ರದಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಗುರುವಾರ ಬಿಹಾರ ಕೋರ್ಟ್‌ನಿಂದ ದೆಹಲಿ ಕೋರ್ಟ್‌ಗೆ ವರ್ಗಾವಣೆ ಮಾಡಿದೆ.ಈ ಪ್ರಕರಣದ ವಿಚಾರಣೆಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದೂ ಸೂಚಿಸಿದೆ.

ಮುಜಫ್ಫರ್‌ಪುರದ ಕೇಂದ್ರ ಅಷ್ಟೆ ಅಲ್ಲದೆ ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿರುವ 16 ಪುನರ್ವಸತಿ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೋರ್ಟ್‌, ಇದೇ ಧೋರಣೆ ಮುಂದುವರಿಸಿದರೆ ಮುಖ್ಯಕಾಯದರ್ಶಿಗೆ ಸಮನ್ಸ್‌ ನೀಡುವ ಎಚ್ಚರಿಕೆ ನೀಡಿದೆ.

ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ನಡೆಸುತ್ತಿರುವ ಈ ಪುನರ್ವಸತಿ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಬಾಲಕಿಯರು ಆರೋಪ ಮಾಡಿದ್ದರು. ಟಾಟಾ ಇನ್ಸಿಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸ್‌ (ಟಿಐಎಸ್‌ಎಸ್‌) ನಡೆಸಿದ ಅಧ್ಯಯನ ವರದಿಯಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದ ವಿಚಾರಣೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು, ಬಿಹಾರದ ಸಾಕೆಟ್‌ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸುತ್ತಿರುವ ವಿಚಾರಣೆಯನ್ನು ಪೋಕ್ಸೊ ಕಾಯ್ದೆಯಡಿ ದೆಹಲಿಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.